ಕೆ.ಆರ್.ಪೇಟೆ:ದೇಶದ ಭವಿಷ್ಯವನ್ನು ರೂಪಿಸುವ ಇಂದಿನ ಮಕ್ಕಳಲ್ಲಿ ಶ್ರೀಕೃಷ್ಣನ ಆದರ್ಶಗಳು ಮೂಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಜೆ.ಎನ್ ರಾಮಕೃಷ್ಣೇಗೌಡ ತಿಳಿಸಿದರು.
ಪಟ್ಟಣದಲ್ಲಿರುವ ಬಿಜಿಎಸ್ ಎಜುಕೇಶನ್ ಸೆಂಟರ್ ಶಾಲಾ ಆವರಣದಲ್ಲಿ ನಡೆದ ಮಕ್ಕಳಿಗೆ ಶ್ರೀ ಕೃಷ್ಣ,ರಾಧೆ ವೇಷ-ಭೂಷಣ ಸ್ಪರ್ಧೆ ಕಾರ್ಯಕ್ರಮವನ್ನು ಮೊಸರು ಕಡಿಯುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು.
ಮುದ್ದು ಮಕ್ಕಳ ನೋಟವೇ ಒಂದು ಚಂದ,ಅದರಲ್ಲೂ ರಾಧೆ ಹಾಗೂ ಕೃಷ್ಣನ ವೇಷಧಾರಿಗಳಾಗಿ ಬಂದಾಗ ನೋಡಲು ಮತ್ತಷ್ಟು ಚಂದ,ಇಂದು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವ ಜನ್ಮಾಷ್ಟಮಿಯಲ್ಲಿ ಕೇವಲ ಒಂದು ಜಾತಿ ಮತ್ತು ಧರ್ಮಕ್ಕೆ ಸೀಮಿತ ಎಂದು ಬಯಸದೆ ಎಲ್ಲಾ ಧರ್ಮದ ಮಕ್ಕಳು ಪಾಲ್ಗೊಂಡಿದ್ದಾರೆ.ನಾವೆಲ್ಲಾ ಒಂದೇ ಎನ್ನುವ ಭಾವನೆ ಸಾರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಹೇಮಗಿರಿ ಬಿಜಿಎಸ್ ಶಾಖಾಮಠದ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಪ್ರತಿ ವರ್ಷವೂ ಶ್ರೀಕೃಷ್ಣನ ಜನ್ಮದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತೇವೆ.ಈ ಪವಿತ್ರ ಸಂದರ್ಭವು ಎಲ್ಲರನ್ನು ಒಂದುಗೂಡಿಸಿ,ಏಕತೆ ಮತ್ತು ನಂಬಿಕೆಯನ್ನು ಸೂಚಿಸುತ್ತದೆ ಮತ್ತು ಎಲ್ಲರೂ ಅತ್ಯಂತ ಉತ್ಸಾಹ ಮತ್ತು ತೇಜಸ್ಸಿನಿಂದ ಆಚರಣೆಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಚರಣ ತಿಲಕ್ ಮಾತನಾಡಿ ಹರ ಮತ್ತು ಹರಿಯನ್ನು ಭಕ್ತಿ, ಶೃದ್ಧೆಯಿಂದ ಪೂಜಿಸುವ ನಾಡು ನಮ್ಮದು.ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ:ಜೆ.ಎನ್ ರಾಮಕೃಷ್ಣೇಗೌಡರು ಕ್ರಿಯಾತ್ಮಕ ಮನಸ್ಸಿನಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆ ಸಂಸ್ಕೃತಿ ಸಂಸ್ಕಾರಕ್ಕೆ ಹೆಚ್ಚು ಹೊತ್ತು ನೀಡುತ್ತಾ ಬಂದಿದ್ದಾರೆ.
ಶಿಕ್ಷಣದ ಮೊದಲ ಹಂತದಲ್ಲಿ ಈ ವೇಷಭೂಷಣ ಸ್ಪರ್ಧೆ ಮಕ್ಕಳಿಗೆ ಇತಿಹಾಸ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಿದೆ.ಬಿಜಿಎಸ್ ಶಾಲೆಯಲ್ಲಿ ಪ್ರತಿಯೊಂದು ಕಾರ್ಯಕ್ರಮವು ಇತಿಹಾಸ ಪುಟ ಮೆಲುಕು ಹಾಕುವ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ಮೂಡಿಬರುತ್ತವೆ.ಸಣ್ಣ-ಸಣ್ಣ ಮಕ್ಕಳು ರಾಧೆ-ಕೃಷ್ಣರ ವೇಷ-ಭೂಷಣದಲ್ಲಿ ಕಣ್ಮನ ಸೆಳೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಕ್ಕಳು ಅಭ್ಯಾಸದ ಜತೆಗೆ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ ಎಂದರು.
ಇದೇ ವೇಳೆ ರಾಧೆ ಮತ್ತು ಕೃಷ್ಣ ಹಾಗೂ ಪಾಂಡವರು,ಕೌರವರ ವಿಶೇಷ ವೇಷ ಧರಿಸಿದ ಪುಟಾಣಿ ಮಕ್ಕಳಿಗೆ ಪ್ರಶಸ್ತಿ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಮುದ್ದಾದ ಪುಟಾಣಿಗಳು ಹಾಗೂ ವಿಶೇಷವಾಗಿ ಮಕ್ಕಳ ಪೋಷಕರು ಜನ್ಮಾಷ್ಟಮಿ ಹಾಡುಗಳ ತಾಳಕ್ಕೆ ತಕ್ಕಂತೆ ಕುಣಿದು ಸಂಭ್ರಮಕ್ಕೆ ಸಾಂಪ್ರದಾಯಿಕ ಮೆರುಗನ್ನು ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಉಪಾಧ್ಯಕ್ಷ ಪಾಪೇಗೌಡ ,ಹಿರಿಯ ಪತ್ರಕರ್ತ ಕೆ.ಆರ್ ನೀಲಕಂಠ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್,ಜಿ. ಪಿ ರಾಜು,ಬಿಜಿಎಸ್ ಶಾಲಾ ಮತ್ತು ಕಾಲೇಜು ಪ್ರಾಂಶುಪಾಲರು,ಶಿಕ್ಷಕರು, ಪೋಷಕರು,ಸೇರಿದಂತೆ ಇತರರು.
—————- ಮನು ಮಾಕವಳ್ಳಿ ಕೆ ಆರ್ ಪೇಟೆ