ಕೊರಟಗೆರೆ:-ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಹೆಣ್ಣು ಕೂಡ ಸ್ವಾವಲಂಭಿಯಾಗಿ ಈ ಭೂಮಿ ಮೇಲೆ ಬದುಕಬಹುದು ಎಂದು ತೊರಿಸಿಕೊಟ್ಟಿದೆ.ಸಂಸ್ಥೆಯ ಸಹಕಾರದಿಂದ ಸಾಕಷ್ಟು ಹೆಣ್ಣು ಮಕ್ಕಳು ತಮ್ಮ ಜೀವನ ರೂಪಿಸಿಕೊಳ್ಳುವುದರ ಜೊತೆಗೆ ಕುಟುಂಬಕ್ಕೆ ಆಧಾರವಾಗಿದ್ದಾರೆ ಎಂದು ಎಲೆರಾಂಪುರ ಕುಂಚಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಶ್ರೀಗಳು ತಾಲೂಕಿನ ತೀತಾ ಗ್ರಾ.ಪಂ ವ್ಯಾಪ್ತಿಯ ಗೊರವನಹಳ್ಳಿಯ ಕಮಲಪ್ರಿಯ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ,ತೀತಾ ವಲಯ ಹಾಗೂ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು.
ಈ ಭೂಮಿಯಲ್ಲಿ ಸ್ವಾರ್ಥಿ ಜನಗಳ ಮಧ್ಯೆ ದಾನ,ಧರ್ಮ,ಸೇವೆ,ಪೂಜೆಗೆ ಮೊತ್ತೊಂದು ಹೆಸರು ಪರಮ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಎಂದರೆ ತಪ್ಪಾಗುವುದಿಲ್ಲ.ಅವರು ತಂದಿರುವ ಯೋಜನೆಗಳು ಗ್ರಾಮೀಣ ಭಾಗದ ಬಡ ಜನರ ಕಣ್ಣೀರು ಒರೆಸುತ್ತಿವೆ ಎಂದರು.
ದುಡಿಯುವ ಗಂಡಸು ಮದ್ಯದ ದಾಸನಾದರೆ ಕುಟುಂಬದ ಸ್ಥಿತಿ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದನ್ನು ನಾವುಗಳು ದಿನನಿತ್ಯವೂ ನೋಡುತ್ತೇವೆ.ಇದನ್ನು ಮನಗಂಡ ಪೂಜ್ಯರು ಮದ್ಯ ವ್ಯರ್ಜನ ಶಿಬಿರಗಳನ್ನು ಏರ್ಪಡಿಸಿ ಬಹಳಷ್ಟು ಜನರ ಕುಡಿತದ ಚಟದಿಂದ ಹೊರಬರುವಂತೆ ಮಾಡಿದ್ದಾರೆ.ಅವರ ಹೆಸರು ಹೇಳಿಕೊಂಡು ಆ ಮನೆಯ ಹೆಣ್ಣುಮಕ್ಕಳು ತುಪ್ಪದ ದೀಪವನ್ನು ಹಚ್ಚುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಬೆಂಗಳೂರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ ಮಾತನಾಡಿ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಕೊರಟಗೆರೆ ತಾಲೂಕಿನಲ್ಲಿ 2300 ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ164 ಅಸಹಾಯಕರಿಗೆ,ನಿರ್ಗತಿಕರಿಗೆ ಮಾಶಾಸನವನ್ನ ನೀಡಲಾಗಿದೆ.ಅದಕ್ಕಾಗಿ 19 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ.ತಾಲೂಕಿನಲ್ಲಿ 9 ಮದ್ಯವರ್ಜನ ಶಿಬಿರ ಆಯೋಜನೆ ಮಾಡಿ 500 ಜನ ಕುಡಿತದಿಂದ ದೂರ ಉಳಿಯುವಂತೆ ಮಾಡಲಾಗಿದೆ ಎಂದರು.
ತಾಲೂಕಿನ ಹಾಲು ಉತ್ಪಾದಕರ ಸಂಘದ 27 ಕಟ್ಟಡಗಳ ನಿರ್ಮಾಣ ಹಾಗು ನವೀಕರಣ ಸೇರಿದಂತೆ ಅದಕ್ಕಾಗಿ 21 ಲಕ್ಷ ಹಣವನ್ನ ನೀಡಲಾಗಿದೆ 27 ದೇವಸ್ಥಾನಕ್ಕೆ 1 ಕೋಟಿ 9ಲಕ್ಷ ರೂಪಾಯಿಗಳನ್ನು ನೀಡಲಾಗಿದೆ.ತಾಲೂಕಿನಲ್ಲಿ ನಾಲ್ಕು ಕೆರೆಗಳಲ್ಲಿ ಹೂಳು ಎತ್ತುವ ಕೆಲಸವನ್ನ ಮಾಡಲಾಗಿದೆ.ನಮ್ಮ ಸಂಘದ ಸದಸ್ಯರ 409 ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ 44 ಲಕ್ಷ ಅನುದಾನ ನೀಡಿ ಅವರ ಮುಂದಿನ ಜೀವನ ರೂಪಿಸಿಕೊಳ್ಳುವಂತೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಸಹಕಾರ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತೀತಾ ಗ್ರಾಪಂ ಅಧ್ಯಕ್ಷೆ ಸುಮಂಗಳಮ್ಮ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಜಿಲ್ಲಾ ನಿರ್ದೇಶಕ ದಿನೇಶ್.ಡಿ. ಕಮಲ ಪ್ರೀಯ ಪ್ಯಾಲೇಸ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಅನಿತಗುಂಡು ಬೆಳಗಾಣಕರ್, ಮಾಲೀಕರಾದ ಲಲೀತಮ್ಮ ಪ್ರಸನ್ನಕುಮಾರ್, ಜನಜಾಗೃತಿ ವೇದಿಕೆಯ ಸದಸ್ಯ ಟಿ.ಕೆ.ಜಗದೀಶ್, ಮಮತ, ಕುಮಾರ್ ಸೇರಿದಂತೆ ಪ್ರಗತಿ ಬಂಧೂ ಸ್ವಸಹಾಯ ಸಂಘಗಳ ಒಕ್ಕೂಟ, ತೀತಾ ವಲಯ ಪದಾಧಿಕಾರಿಗಳು ಹಾಜರಿದ್ದರು.
——————-ಶ್ರೀನಿವಾಸ್ ಕೊರಟಿಗೆರೆ