ಕೊರಟಗೆರೆ :-ಸರಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಖರ್ಚು ಮಾಡಿದರು ಸಹ,ಅಭಿವೃದ್ಧಿ ಕೆಲಸಗಳಿಗೆ ಸಾಕಷ್ಟು ಹಣ ಸಂಗ್ರಹ ಇದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಆ.19ರಂದು ಸುರಿದ ಮಳೆಯಿಂದ ಹಾನಿಗೀಡಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ,ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಪರಿವೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಾವು ಗ್ಯಾರಂಟಿ ಕೊಡುವುದು ಬೇರೆ ವಿಚಾರ.ಈ ಬಗ್ಗೆ ಸತತವಾಗಿ ಅಪಪ್ರಚಾರ ಮಾಡಲಾಗುತ್ತಿದೆ.ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಬಜೆಟ್ ಮಂಡಿಸಲಾಗಿದೆ.ರಾಜ್ಯ ಹಿಂದಿಗಿಂತಲೂ ಅಭಿವೃದ್ಧಿ ವಿಷಯಗಳಲ್ಲಿ ಮುಂದಿದೆ.ಆದರೂ ವಿಪಕ್ಷಗಳು ಕೆಟ್ಟ ಹೆಸರುnbತರುವ ಉದ್ದೇಶದಿಂದ ಸರಕಾರದ ಬಳಿ ಹಣವಿಲ್ಲ ಎಂದು ಬೊಬ್ಬೆ ಹೊಡೆಯುತ್ತಿವೆ.ನಮ್ಮ ಮುಖ್ಯಮಂತ್ರಿಗಳು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ.ಕಾಂಗ್ರೆಸ್ ಹಿಂದಿನಿಂದಲೂ ಬಡವರ ಪರವಾಗಿ ನಿಂತ ಪಕ್ಷ ಅದನ್ನು ಮುಂದೆಯೂ ಮಾಡಲಿದೆ ಎಂದರು.
ನಮ್ಮ ಜಿಲ್ಲೆಯಲ್ಲಿಯೇ ಏಪ್ರಿಲ್ 24ರವರೆಗೆ ಡಿಸಿಯವರ ಪಿ.ಡಿ ಖಾತೆಯಲ್ಲಿ ರೂ. 30.59 ಕೋಟಿ ಹಣವಿತ್ತು.ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸ್ವಲ್ಪ ಹಣ ಖರ್ಚು ಮಾಡಿದ್ದಾರೆ.ಪ್ರಸ್ತುತ ರೂ. 21.92 ಕೋಟಿ ಹಣವಿದೆ.ಕೊರಟಗೆರೆ ತಾಲ್ಲೂಕಿಗೆ 39 ಲಕ್ಷ ರೂ. ಹಣ ಲಭ್ಯವಿದೆ.ಜಿಲ್ಲಾಧಿಕಾರಿಯವರ ಹೊರತಾಗಿ ಎಲ್ಲ ತಾಲ್ಲೂಕುಗಳ ತಹಶೀಲ್ದಾರರ ಪರಿಹಾರ ನಿಧಿಯಲ್ಲಿ ರೂ. 3.49 ಕೋಟಿ ಇದೆ.ಪರಿಹಾರ ಕಲ್ಪಿಸಲು ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೂ. 5300 ಕೋಟಿ ಭದ್ರಾ ಮೇಲ್ದಂಡೆ ಯೋಜನೆಗೆ ನೀಡಲಾಗುವುದು ಎಂದು ಹೇಳಿದ್ದರು.ಈಗ ವಾಪಸ್ ಪಡೆದುಕೊಂಡಿದ್ದಾರೆ.ಇದು ಮಲತಾಯಿ ಧೋರಣೆ. ದೇಶದಲ್ಲಿ ಜಿಎಸ್‌ಟಿ ಕಟ್ಟುವುದರಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ.ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನುದಾನ ನೀಡುವುದರಲ್ಲಿ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.ವಿರೋಧ ಪಕ್ಷ ಇದನ್ನು ಪ್ರಶ್ನಿಸಿ ರಾಜ್ಯಕ್ಕಾಗಿರುವ ಅನ್ಯಾಯವನ್ನು ಸರಿಪಡಿಸಲಿ ಅದನ್ನು ಬಿಟ್ಟು ಅನವಶ್ಯಕ ಸುಳ್ಳು ಅಪಪ್ರಚಾರ ಸಲ್ಲದು ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟರು.
ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾದ ಮನೆಗಳನ್ನು ಗುರುತಿಸಿ 11.29 ಲಕ್ಷ ರೂ. ಪರಿಹಾರ ಕಲ್ಪಿಸಲಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು.ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಕೆಲವೆಡೆ ಕೆರೆಗಳು ತುಂಬಿ ಕೋಡಿ ಹರಿದಿವೆ.ಯಾವ ಕೆರೆಗಳು ಒಡೆದಿಲ್ಲ. ಮಧುಗಿರಿ ಮತ್ತು ಪಾವಗಡ ಭಾಗದಲ್ಲಿ ವಾಡಿಕೆಗಿಂತ ಕಡಿಮೆಮಳೆಯಾಗಿದೆ.ಕೆರೆಗಳು ತುಂಬಬೇಕಿದೆ ಎಂದರು.
ಪ್ರವಾಹ ಪರಿಹಾರದ ನಿಧಿಯಲ್ಲಿ ಜಿಲ್ಲಾಧಿಕಾರಿಯವರು ಹಣ ನೀಡುತ್ತಾರೆ.ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಹಾನಿಯಾಗಿಲ್ಲ. ಜಿಲ್ಲೆಯಲ್ಲಿ 135 ಮನೆಗಳಿಗೆ ಸಣ್ಣ-ಪುಟ್ಟ ಹಾನಿಯಾಗಿವೆ.ಕೊರಟಗೆರೆಯಲ್ಲಿ 15 ಮನೆಗಳಿಗೆ ಹಾನಿಯಾಗಿದೆ. ಜಿಲ್ಲಾಧಿಕಾರಿಯವರು ಹಾನಿಯನ್ನು ಪರಿಶೀಲಿಸಿ 11.29 ಲಕ್ಷ ರೂ. ಪರಿಹಾರವನ್ನು ಸಂತ್ರಸ್ತರ ಬ್ಯಾಂಕ್ ಖಾತೆಗೆ ನೆರವಾಗಿ ಜಮಾಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ.ಮಳೆಯಿಂದ ಜಾನುವಾರು ಸಾವು, ಬೆಳೆ ನಷ್ಟ ಹೆಚ್ಚಾಗಿ ಸಂಭವಿಸಿರುವುದು ಕಂಡು ಬಂದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಇರುವ ಅನುದಾನವನ್ನು ಖರ್ಚು ಮಾಡಲಿದೆ.ಜಿಲ್ಲೆಯಲ್ಲಿ ಯಾವುದೇ ತೊಂದರೆಯಾಗದಂತೆ ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ಹೇಳಿದರು.
ಮಳೆಗಾಲ ಮುಗಿದ ನಂತರ ನಷ್ಟದ ಬಗ್ಗೆ ಪರಿಶೀಲಿಸಿ ಕೇಂದ್ರಕ್ಕೆ ವರದಿ ನೀಡುತ್ತೇವೆ.ರಾಜಗಾಲುವೆ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.ಬೇರೆ ಜಿಲ್ಲೆಗಳಲ್ಲಿ ಕೆರೆಗಳು ಒತ್ತುವರಿಯಾಗಿವೆ.ಚನ್ನಸಾಗರ ಜಯಮಂಗಲಿ ನದಿಗೆ ರಕ್ಷಣೆ ಗೋಡೆ ಕಟ್ಟಬೇಕಿತ್ತು.ಬ್ಯಾರೇಜ್ ತುಂಬಿ ಊರಿನ ಒಳಗೆ ನೀರು ಹರಿಯುತ್ತಿದೆ.ಇದನ್ನು ಸರಿಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ವರಿಷ್ಠಾಧಿಕಾರಿಗಳಾದ ಅಶೋಕ್, ಉಪನಿರ್ದೇಶಕರು ಕೃಷಿ ಇಲಾಖೆ ದೀಪಶ್ರೀ ,ತೋಟಗಾರಿಕಾ ಜಿಲ್ಲಾ ಉಪ ನಿರ್ದೇಶಕರು ,ತಹಶೀಲ್ದಾರ್ ಮಂಜುನಾಥ್ ಕೆ, ಇ ಓ ಅಪೂರ್ವ ಅನಂತರಾಮು ಸೇರಿದಂತೆ ಹಲವರು ಹಾಜರಿದ್ದರು.
———————-ಶ್ರೀನಿವಾಸ್ ಕೊರಟಿಗೆರೆ