ಬೇಲೂರು;ಬೆಳ್ಳಾವರ ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಚಲನವಲನ ಗಮನಿಸಿ ಮಾಹಿತಿ ನೀಡಲು ಬಂದಿದ್ದ ಇಟಿಎಫ್ ಸಿಬ್ಬಂದಿಯನ್ನು ಕೂಡಿ ಹಾಕಲು ಗ್ರಾಮಸ್ಥರು ಮುಂದಾದ ಘಟನೆ ವರದಿಯಾಗಿದೆ.
ಗ್ರಾಮದ ಬಳಿ ಮೂವತ್ತಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು ಪ್ರತಿದಿನ ಕಾಫಿ, ಮೆಣಸು, ಬಾಳೆ, ಅಡಿಕೆ, ಭತ್ತ ಸೇರಿ ಅಪಾರ ಪ್ರಮಾಣದ ಬೆಳೆ ನಾಶಪಡಿಸುತ್ತಿವೆ.ಇದರಿಂದಾಗಿ ಕಾಫಿ ಬೆಳೆಗಾರರು ಹಾಗೂ ರೈತರು ಕಂಗಾಲಾಗಿ ಹೋಗಿದ್ದಾರೆ.
ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವವರೆಗೂ ಸ್ಥಳದಿಂದ ತೆರಳದಂತೆ ಇಟಿಎಫ್ ಸಿಬ್ಬಂದಿಗಳಿಗೆ ಗ್ರಾಮಸ್ಥರು ತಾಕೀತು ಮಾಡಿದ್ದಾರೆ.ಸುದ್ದಿ ತಿಳಿದು ಗ್ರಾಮಕ್ಕೆ ಆಗಮಿಸಿದ ಆರ್ಎಫ್ಓ ವಿನಯ್ ಹಾಗೂ ಇತರೆ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.ರೈತರು ಹಾಗೂ ಕಾಫಿ ಬೆಳೆಗಾರರ ಆಕ್ರೋಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. ಡಿಎಫ್ಓ ಗ್ರಾಮಕ್ಕೆ ಭೇಟಿ ನೀಡುವವರೆಗೂ ಯಾರೂ ಇಲ್ಲಿಂದ ಹೋಗಬಾರದೆಂದು ಪಟ್ಟು ಹಿಡಿದಿದ್ದು ಕಡೆಗೆ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಭರವಸೆ ನೀಡಿದ ನಂತರ ಅಲ್ಲಿಂದ ತೆರಳಲು ಸ್ಥಳೀಯರು ಅನುವು ಮಾಡಿಕೊಟ್ಟಿದ್ದಾರೆ.
ಈ ವಿಚಾರವಾಗಿ ಶಾಸಕ ಹೆಚ್. ಕೆ ಸುರೇಶ್ ಮಾತನಾಡಿ, ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕಾಫಿ ಬೆಳೆಗಾರರ ತುರ್ತು ಸಭೆಯನ್ನು ಆ ಭಾಗದಲ್ಲಿ ಕರೆದಿದ್ದು ನಂತರ ಅಲ್ಲಿಯ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅರಣ್ಯ ಅಧಿಕಾರಿಗಳಿಗೆ ಒದಗಿಸುವುದರ ಜೊತೆಗೆ ಶಾಶ್ವತ ಪರಿಹಾರಕ್ಕಾಗಿ ಅವರಲ್ಲಿ ಮನವಿ ಮಾಡಲಾಗುವುದು. ಅರಣ್ಯ ಇಲಾಖೆಯವರು ಕೇವಲ ಆನೆಗಳನ್ನು ಓಡಿಸುವುದರ ಸಾಲದು ಅವುಗಳನ್ನು ಶಾಶ್ವತವಾಗಿ ಕಾಡಿಗೆ ಅಟ್ಟುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.