ಮೂಡಿಗೆರೆ:ವಿಕಲಚೇತನರ ಅನುಕೂಲಕ್ಕಾಗಿ ಸರಕಾರ ನೀಡುವ ಉಚಿತ ತ್ರಿಚಕ್ರ ವಾಹನವನ್ನು
ದುರುಪಯೋಗಪಡಿಸಿಕೊಳ್ಳದೇ ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಸೋಮವಾರ ಪಟ್ಟಣದ ತಾ.ಪಂ. ಆವರಣದಲ್ಲಿ ವಿಕಲಚೇತನ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ೨೦೨೩-೨೪ನೇ ಸಾಲಿನ ೨೨ ಮಂದಿ ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರವಾಹನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾನು ಶಾಸಕರಾಗುವ ಮುನ್ನ ಕ್ಷೇತ್ರ ಪ್ರವಾಸ ಮಾಡಿದ ಸಂದರ್ಭದಲ್ಲಿ ತಾಲೂಕಿನಲ್ಲಿ ಅನೇಕ
ವಿಕಲಚೇತನರು ಪಟ್ಟಣಕ್ಕೆ ಬರಲು ಸಾಧ್ಯವಾಗದಿರುವುದು ಕಂಡು ಬoದಿತ್ತು. ಸರಕಾರದ ಈ ಮಹತ್ವಕಾಂಕ್ಷಿ ಯೋಜನೆಯಿಂದ ಈಗ ತ್ರಿಚಕ್ರ ವಾಹನ ವಿಕಲಚೇತನರಿಗೆ ಸಿಗುತ್ತಿರುವುದರಿಂದ ಅಂತಹವರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ತ್ರಿಚಕ್ರ ವಾಹನದ ಅವಶ್ಯಕತೆ ಇರುವ ಇನ್ನೂ ಅನೇಕ ಫಲಾನುಭವಿಗಳು ಮುಂದಿನ ವರ್ಷದ ಸಾಲಿನಲ್ಲಿ ಅರ್ಜಿ ಸಲ್ಲಿಸಬೇಕು.ಈಗ ವಿತರಣೆಯಾಗಿರುವ ತ್ರಿಚಕ್ರ ವಾಹನವನ್ನು ಜೋಪಾನ
ಮಾಡಿಕೊಳ್ಳುವ ಜತೆಗೆ ಅದರ ಉಪಯೋಗ ಪಡೆದುಕೊಳ್ಳಬೇಕು.ಅಲ್ಲದೇ ಚಾಲನೆ ಮಾಡಲು ಬಾರದಿದ್ದವರು ತರಬೇತಿ ಪಡೆದು, ನಂತರ ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ
ನೀಡಿದರು.
ತಾ.ಪ. ಇಒ ದಯಾವತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹಂತೇಶ್ ಬಜೇಂತ್ರಿ, ವಿಕಲಚೇತನ ಇಲಾಖೆ ಅಧಿಕಾರಿ ವೀರೇಶ್ ಮತ್ತಿತರರಿದ್ದರು.
——–ವಿಜಯ್ ಕುಮಾರ್