ಮೂಡಿಗೆರೆ: ಮಹಿಳೆಯೋರ್ವರು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರ ಮನೆಗೆ ತೆರಳಿ ಶಾಸಕಿ ಅವರ ಎದುರಿನಲ್ಲೇ ಏರು ದ್ವನಿಯಲ್ಲಿ ಕಿರುಚಾಡಿದ್ದು ಮಾತು ಕೇಳದ ಮಹಿಳೆಯನ್ನು ನಂತರ ಪೋಲೀಸರು ವಶಕ್ಕೆ ಪಡೆದ ಅಪರೂಪದ ಘಟನೆ ಸೋಮವಾರ ನಡೆದಿದೆ.
ಕಳಸದ ಉಪವಲಯಾರಣ್ಯಾಧಿಕಾರಿ ಚಂದನ್ ಕುಮಾರ್ ಎಂಬುವವರು ನಕಲಿ ಟಿಕೇಟ್ ಸೃಷ್ಟಿಸಿ ಚಾರಣಿಗರಿಗೆ ಬಲ್ಲಾಳ್ ರಾಯನದುರ್ಗ,ಬಂಡಾಜೆ ಫಾಲ್ಸ್ ಸೇರಿದಂತೆ ವಿವಿದೆಡೆಗೆ ಚಾರಣಕ್ಕೆ ಆನ್ಲೈನ್ ಮೂಲಕ ನಕಲಿ ಟಿಕೇಟ್ ಸೃಷ್ಟಿಸಿ ಮಾರಾಟ ಮಾಡಿದ್ದರು ಎನ್ನಲಾಗಿದೆ.
ಅದರ ಹಣವನ್ನು ಬಣಕಲ್ ಗ್ರಾಮದ ಮಹಿಳೆಯೊಬ್ಬರ ಖಾತೆಗೆ ಜಮೆಯಾಗಿದೆ ಎಂದು ಕೆಳಗೂರು ಗ್ರಾಮದ ವಾಸಿ ರಮೇಶ್ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು.ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿದ್ದು ಇದನ್ನು ಅರಿತ ಮಹಿಳೆ ಏಕಾಏಕಿ ಶಾಸಕಿ ನಯನಾ ಮೋಟಮ್ಮ ಅವರ ಮನೆಗೆ ತೆರಳಿ ನನ್ನ
ವಿರುದ್ದ ಕ್ರಮಕೈಗೊಳ್ಳಲು ತಾವು ಅಧಿಕಾರಿಗಳಿಗೆ ಸೂಚನೆ ನೀಡಿದ್ದೀರಿ ಎಂದು ಕಿರುಚಾಡಿದ್ದಾರೆ.
ಆಗ ಶಾಸಕಿ ನಯನಾ ಅವರು ಮಹಿಳೆಯನ್ನು ಸಮಾಧಾನಪಡಸಲು ಮುಂದಾಗಿ ಪ್ರಕರಣ ತನಿಖೆಯ ಹಂತದಲ್ಲಿದೆ. ತನಿಖೆ ಮುಗಿಯುವವರೆಗೂ ಸುಮ್ಮನಿರಿ,ಕಿರುಚಾಡಬೇಡಿ,ನೀವು ಪ್ರಕರಣದಲ್ಲಿ ಭಾಗಿಯಾಗಿದ್ದಲ್ಲಿ ಮಾತ್ರನಿಮ್ಮ ಹೆಸರು ಬರುತ್ತದೆ,ಇಲ್ಲವಾದಲ್ಲಿ ನಿಮಗೂ ಪ್ರಕರಣಕ್ಕೂ ಸಂಭoದವಿರುವುದಿಲ್ಲ ಎಂದು ಎಷ್ಟೇ ಹೇಳಿದರೂ ಕೇಳದ ಮಹಿಳೆ
ಕಿರುಚಾಟ ಮುಂದುವರಿಸಿದ್ದಾರೆ.ಆಗ ಸ್ಥಳದಲ್ಲಿದ್ದ ಸಾರ್ವಜನಿಕರು ಪೋಲೀಸರಿಗೆ ಕರೆ ಮಾಡಿದ್ದು ಕೂಡಲೆ ಸ್ಥಳಕ್ಕೆ ಬಂದ ಪಿಎಸ್ಐ ಶ್ರೀನಾಥರೆಡ್ಡಿ ಮಹಿಳೆಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿ ತಪ್ಪೊಪ್ಪಿಗೆ ಪಡೆದು ಕೇಸು
ದಾಖಲಿಸದೆ ಬಿಟ್ಟು ಕಳುಹಿಸಿದ್ದಾರೆ.
ವರದಿ: ವಿಜಯಕುಮಾರ್,
ಮೂಡಿಗೆರೆ