ಹಾಸನ-ಕಾಶ್ಮೀರದಲ್ಲಿ 370‌ ಆರ್ಟಿಕಲ್ ತೆಗೆದ ಮೇಲೆ ಜನಸಾಮಾನ್ಯರು ಬೀದಿಯಲ್ಲಿ ನೆಮ್ಮದಿಯಿಂದ ಓಡಾಡುತ್ತಿದ್ದಾರೆ-ಹೆಚ್ ಡಿ ದೇವೇಗೌಡ

ಹಾಸನ;ಪ್ರಧಾನಿ ನರೇಂದ್ರ ಮೋದಿಯವರು,ಅಮಿತ್ ಶಾ ಅವರು 370ಆರ್ಟಿಕಲ್ ತೆಗೆದ ಮೇಲೆ ಕಾಶ್ಮೀರದ ಜನಸಾಮಾನ್ಯರು ಬೀದಿಯಲ್ಲಿ ನೆಮ್ಮದಿಯಿಂದ ಓಡಾಡುತ್ತಿದ್ದಾರೆ ಎಂದು ಮಾಜಿಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡರು ತಿಳಿಸಿದರು.

ನಾಲ್ಕು ತಿಂಗಳ ನಂತರ ಹೆಚ್.ಡಿ.ದೇವೇಗೌಡರು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹೊಳೆನರಸೀಪುರದ ಹೇಮಾವತಿ ಕ್ರೀಡಾಂಗಣದ ಹೆಲಿಪ್ಯಾಡ್‌ಗೆ ಆಗಮಿಸಿ ಬಳಿಕ ರಸ್ತೆ ಮಾರ್ಗವಾಗಿ ಹೊಳೆನರಸೀಪುರ ತಾಲ್ಲೂಕಿನ, ಹಳೆಕೋಟೆ ಗ್ರಾಮದ, ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ,ಕಡೆ ಶ್ರಾವಣ ಶನಿವಾರದ ಹಿನ್ನೆಲೆ ಶ್ರೀ ರಂಗನಾಥಸ್ವಾಮಿ ಗೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ದೇವೇಗೌಡರು ಮಾತನಾಡಿ,ಮೋದಿಯವರು ಬಂದ ಮೇಲೆ ಉಗ್ರವಾದಿಗಳನ್ನು ತಹಬಂದಿಗೆ ತಂದಿದ್ದಾರೆ.ಈಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ,ಮೋದಿ ಮತ್ತು ಶಾ ಕಠಿಣವಾದ ಕ್ರಮ ತೆಗೆದುಕೊಂಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಹಿಂದೆ ನಡೆಯುತ್ತಿದ್ದ ಅಕ್ರಮವನ್ನು ಸ್ವಲ್ಪ ಮಟ್ಟಿಗೆ ಸುಧಾರಣೆ ಮಾಡಿದ್ದಾರೆ.ಇಂದು ಅಲ್ಲಿನ ಜನ ಬೀದಿಯಲ್ಲಿ ನೆಮ್ಮದಿಯಿಂದ ಓಡಾಡುತ್ತಿದ್ದಾರೆ,ಈಗ ಅಲ್ಲಿ ಚುನಾವಣೆ ನಡೆಯುತ್ತಿದೆ. ಓಟು ಯಾರಿಗೆ ಹಾಕ್ತಾರೋ ಬಿಡ್ತರೋ ಕೇಳಬಾರದು. ಮೋದಿಯವರು ಒಳ್ಳೆಯ ಕೆಲಸ ಮಾಡಿದ್ದಾರೆ, ನೆಮ್ಮದಿಯಿಂದ ಅಲ್ಲಿನ ಜನರು ಮತ ಹಾಕುತ್ತಾರೆ ಎಂದರು.

ಕಾಶ್ಮೀರದಲ್ಲಿರುವ ಶಿವನ ದೇವಾಲಯಕ್ಕೆ 230 ಮೆಟ್ಟಿಲು ಇದೆ ಹತ್ತುವುದು ಕಷ್ಟ,ನಾನು ಮೂವತ್ತು ಮೆಟ್ಟಿಲು ಹತ್ತಿದೆ. ಆಮೇಲೆ ಆಗಲಿಲ್ಲ,ಆಗ ಸಿಆರ್‌ಪಿಎಫ್ ಯೋಧರು ದೇವಾಲಯಕ್ಕೆ ಕರೆದುಕೊಂಡು ಹೋದಾಗ ಪೂಜೆ ಸಲ್ಲಿಸಿದೆನು. ನಾಥದ್ವಾರದಲ್ಲಿ ಕೃಷ್ಣನ ದೇವಾಲಯ ಇದ್ದು,ಬಹಳ ಪ್ರಸಿದ್ದವಾದದೇವಾಲಯ ಅದು,ಅಲ್ಲಿಗೂ ಹೋಗಿದ್ದೆ ಎಂದು ಹೇಳಿದರು.

ಇನ್ನೂ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ವಿಚಾರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ನಾನು ಕರ್ನಾಟಕದ ಯಾವುದೇ ವಿಷಯ ಈಗ ಮಾತನಾಡುವುದಿಲ್ಲ, ಸಮಯ ಬರುತ್ತೆ ಆಗ ಮಾತನಾಡುತ್ತೇನೆ, ಹಾಸನಕ್ಕೆ ಬರುತ್ತೇನೆ,ರಾಜ್ಯಾದ್ಯಂತ ಪ್ರವಾಸ ಮಾಡುವೆನು.ಮಂಡಿ ನೋವು ಬಿಟ್ಟರೆ ಆರೋಗ್ಯ ಸರಿಯಿದೆ ಎಂದರು.

ಕಾಂಗ್ರೆಸ್‌ನಿಂದ ರಾಜಭವನ ಚಲೋ ವಿಚಾರದ ಪ್ರಶ್ನೆಗೆ ಉತ್ತರಿಸಿ,ಅದರ ಬಗ್ಗೆ ಈಗ ನಾನು ಮಾತನಾಡಲ್ಲ ಮುಂದೆ ಮಾತನಾಡುವ ಕಾಲ ಬರುತ್ತದೆ, ರಂಗನಾಥನ ಆಶೀರ್ವಾದದಿಂದ ಇನ್ನೂ ನಾಲ್ಕಾರು ವರ್ಷ ರಾಜಕೀಯ ಮಾಡುತ್ತೇನೆ, ಹಾಸನ ನನ್ನ ಜಿಲ್ಲೆ,ನನ್ನ ಹುಟ್ಟೂರು,ಸ್ವಂತ ಕ್ಷೇತ್ರ ಇದನ್ನು ಹೇಗೆ ಮರೆಯಲಿ ? ಸದ್ಯಕ್ಕೆ ತಾತ್ಕಾಲಿಕವಾಗಿ ನಾನು ಜಿಲ್ಲಾ ಪ್ರವಾಸ ಮಾಡಲ್ಲ,ಕೆಲವು ದಿನಗಳ ನಂತರ ನಿಮಗೆ ತಿಳಿಸಿ ಪ್ರವಾಸ ಮಾಡುತ್ತೇನೆ ಎಂದು ಹೇಳಿದರು.

ಮಾಜಿಸಚಿವ ಹೆಚ್‌.ಡಿ.ರೇವಣ್ಣ,ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಪೂಜಾ ಕಾರ್ಯದಲ್ಲಿ ಭಾಗಿಯಾದರು.

ಈ ವೇಳೆ ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್,ಮುಖಂಡರಾದ ಅರಸೀಕೆರೆ ಸಂತೋಷ್ ,ಜೆಡಿಎಸ್ ವಕ್ತಾರ ಹೊಂಗೆರೆ ರಘು ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?