ಅರಕಲಗೂಡು-ಗ್ರಾಮಗಳಿಗೆ ಬಂದಿರುವ ವಲಸಿಗರು,ಟ್ರಕ್ ಡ್ರೈವರ್ ಗಳು ಹಾಗು ಸ್ಥಳೀಯರನ್ನು ಹೆಚ್ ಐ ವಿ ಪರೀಕ್ಷೆಗೆ ಒಳಪಡಿಸುವ ಮೂಲಕ ಹೆಚ್ ಐ ವಿ ಹರಡುವಿಕೆಯನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕರಾದ ಪರಶುರಾಮ ಶಿರೂರ ತಿಳಿಸಿದರು.
ತಾಲೂಕಿನ ದುಮ್ಮಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ,ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ,ಅರಕಲಗೂಡು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗ,ಸಂತೆಮರೂರ ಗ್ರಾಮ ಪಂಚಾಯತಿ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾರಣಾಂತಿಕ ಏಡ್ಸ್ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ.ಅದರಲ್ಲೂ ಯುವ ಸಮುದಾಯ ಈ ಕಾಯಿಲೆಗೆ ತುತ್ತಾಗುತ್ತಿರುವುದು ಕಳವಳಕಾರಿಯಾಗಿದೆ.ಈ ಕಾರಣಕ್ಕೆ ಹಲವಾರು ಸರಕಾರಿ ಹಾಗು ಖಾಸಗಿ ಸಂಸ್ಥೆಗ ಸಹಯೋಗದಲ್ಲಿ ಹೋಬಳಿ ಹಾಗು ಹಳ್ಳಿಗಳ ಮಟ್ಟದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪರಶುರಾಮ ಶಿರೂರ ಮನವಿ ಮಾಡಿಕೊಂಡರು.
ಜೊತೆಗೆ ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ವಿಪರೀತ ಏರಿಕೆ ಕಾಣುತ್ತಿದ್ದು ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕು.ಮನೆಯ ಸುತ್ತ-ಮುತ್ತ ನೀರು ನಿಲ್ಲದ ಹಾಗೆ ಕಾಳಜಿ ವಹಿಸಬೇಕು.ಜ್ವರ ಸುಸ್ತು ಕಂಡುಬಂದರೆ ತಕ್ಷಣ ಸ್ಥಳೀಯ ಸರಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಅವರು ಸಾರ್ವಜನಿಕರಿಗೆ ಸಲಹೆ ನೀಡಿದರು.
ಶಿಬಿರದಲ್ಲಿ ನೂರಾರು ಜನ ಸಾರ್ವಜನಿಕರು ಭಾಗವಹಿಸಿ ಚಿಕಿತ್ಸೆ ಪಡೆದುಕೊಂಡರು.
ಈ ಸಂದರ್ಭ ಸಂತೆಮರೂರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರಾಜೇಗೌಡ,ಕಾರ್ಯದರ್ಶಿ ಮಂಜುನಾಥ ಐಸಿಟಿಸಿ ಪ್ರಯೋಗಶಾಲಾ ತಂತ್ರಜ್ಞರಾದ ಗೌರಮ್ಮ ,ಎನ್ ಸಿ ಡಿ ವಿಭಾಗದ ಆಪ್ತಸಮಾಲೋಚಕರಾದ ಉಮೇಶ್, ಶುಶ್ರೂಷಕರಾದ ಲಲಿತಾ,ಹಾಸನದ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಘದ ಕ್ಷೇತ್ರ ಕಾರ್ಯಕರ್ತರಾದ ಚಂದ್ರಶೇಖರ್, ಆಶಾ ಕಾರ್ಯಕರ್ತೆ ರೂಪಾ ಹಾಗು ಪಂಚಾಯಿತಿಯ ಸಿಬ್ಬಂದಿ ವರ್ಗದವರು ಇದ್ದರು.
———————-ಶಶಿಕುಮಾರ್ ಕೆಲ್ಲೂರು