ಕುಶಾಲನಗರ-ನಿಕಟಪೂರ್ವ ಕುಲಸಚಿವರಾದ ಡಾ.ಸೀನಪ್ಪ ಅವರಿಗೆ ಅಭಿನಂದನೆ ಮತ್ತು ಬೀಳ್ಕೊಡುಗೆ ಸಮಾರಂಭ

ಕುಶಾಲನಗರ:ಕೊಡಗು ವಿಶ್ವವಿದ್ಯಾಲಯವನ್ನು ಮಾದರಿ ವಿಶ್ವವಿದ್ಯಾಲಯವನ್ನಾಗಿ ಮಾಡುವ ನಿಟ್ಟಿನಲ್ಲಿ ಹಲವಾರು ಇತಿಮಿತಿಗಳ ನಡುವೆ ಹತ್ತು ಹಲವು ಯೋಜನೆಗಳನ್ನು ರೂಪಿಸಿಕೊಂಡು ಪಾರದರ್ಶಕತೆ ಮತ್ತು ನಿಷ್ಠೆಯಿಂದ ಸಂಸ್ಥೆಯನ್ನು ಕಟ್ಟುವ ಬಹುದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಲಾಗುತ್ತಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರು ಹೇಳಿದರು.

ಕೊಡಗು ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಸಚಿವರಾದ ಡಾ. ಸೀನಪ್ಪ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನೆ ಮತ್ತು ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಜ್ಞಾನ, ವ್ಯಕ್ತಿತ್ವ, ಕೌಶಲ್ಯ ಮತ್ತು ವಿವೇಕ ಇವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ವ್ಯಕ್ತಿ ಗೌರವಿಸಲ್ಪಡುತ್ತಾನೆ.ಅವಿರತ ಪರಿಶ್ರಮ,ನಿಷ್ಠೆ,ಪಾರದರ್ಶಕ ಆಡಳಿತವನ್ನು ಸಮರ್ಥವಾಗಿ ನಿರ್ವಹಿಸಿದರೆ ಸಂಸ್ಥೆಯ ಸರ್ವತೋಮುಖ ಪ್ರಗತಿ ಸಾಧ್ಯ.ಯಾವುದೇ ಒಬ್ಬ ವ್ಯಕ್ತಿ ತನಗೆ ಸಿಕ್ಕಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯವಿದೆ.ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಚಾರ ಮಾಡುವ ಮನೋಭಾವ ಮತ್ತು ಕಾರ್ಯ ತತ್ಪರತೆಯ ಗುಣವನ್ನು ಹೊಂದಿರುವುದು ಬಹು ಮುಖ್ಯವಾದದ್ದು .ಈ ನಿಟ್ಟಿನಲ್ಲಿ ಡಾ. ಸೀನಪ್ಪ ಅವರು ಒಂದೂವರೆ ವರ್ಷದ ಅವಧಿಯಲ್ಲಿ ಬಹಳಷ್ಟು ಉತ್ತಮ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಡಾ. ಸೀನಪ್ಪ ಅವರು,ಕೊಡಗು ವಿಶ್ವವಿದ್ಯಾಲಯದ ಕುಲಸಚಿವನಾಗಿ ನನಗೆ ಸಿಕ್ಕಂತಹ ಈ ಅವಧಿಯಲ್ಲಿ ಹಲವಾರು ಉತ್ತಮ ಕೆಲಸಗಳನ್ನು ಮಾಡುವುದಕ್ಕೆ ಸಾಧ್ಯವಾಗಿದೆ. ಸ್ನಾತಕ ಪದವಿ ಪರೀಕ್ಷೆಗಳು ಮುಗಿದ ಕೇವಲ 24 ಗಂಟೆಯಲ್ಲಿ ಸ್ನಾತಕ ಪದವಿಯ ಫಲಿತಾಂಶವನ್ನು ಪ್ರಕಟಿಸಿದ ಹೆಗ್ಗಳಿಕೆಗೆ ವಿಶ್ವವಿದ್ಯಾಲಯವು ಪಾತ್ರವಾಗಲು ಸಾಧ್ಯವಾಯಿತು.ಕೊಡಗು ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ವೃಂದದವರ ನಿರಂತರ ಸಹಕಾರ ಮತ್ತು ಕೊಡಗು ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಡುವ ಸಂಯೋಜಿತ ಮತ್ತು ಘಟಕ ಕಾಲೇಜುಗಳ ಪ್ರಾಂಶುಪಾಲರುಗಳು ಮತ್ತು ಬೋಧಕ ಸಿಬ್ಬಂದಿಗಳ ನೀಡಿದ ಪ್ರೋತ್ಸಾಹ ಮತ್ತು ಸಹಕಾರದಿಂದ ಉತ್ತಮ ಕೆಲಸವನ್ನು ಮಾಡುವುದಕ್ಕೆ ಸಾಧ್ಯವಾಗಿದೆ. ಈ ವಿಶ್ವವಿದ್ಯಾಲಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಹೊಂದಲಿ ಎಂದು ಹರಿಸಿದರು.

ನೂತನ ಕುಲಸಚಿವರು (ಮೌಲ್ಯಮಾಪನ) ಆದ ಪ್ರೊ. ಸುರೇಶ್ ಎಂ ಅವರು ಮಾತನಾಡಿ,ಕೊಡಗು ವಿಶ್ವವಿದ್ಯಾಲಯದ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು.ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮತ್ತು ಕೌಶಲ್ಯಾಧಾರಿತ ಶಿಕ್ಷಣವನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.

ಕೊಡಗು ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳ ಸಂಯೋಜಕರಾದ ಪ್ರೊ. ರವಿಶಂಕರ್ ಎಂ. ಎನ್. ಅವರು ಸ್ವಾಗತದ ಜೊತೆಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಗುಣಶ್ರೀ ಅವರು ನಿಕಟಪೂರ್ವ ಕುಲಸಚಿವರಾದ ಡಾ. ಸೀನಪ್ಪ ಅವರ ಕುರಿತು ಅಭಿನಂದನಾ ನುಡಿಗಳನ್ನಾಡಿದರು.

ಅಭಿನಂದನೆ ಮತ್ತು ಬಿಳ್ಕೊಡುಗೆ ಸಮಾರಂಭದಲ್ಲಿ ವಿವಿಧ ವಿಭಾಗದ ಉಪನ್ಯಾಸಕರು,ಬೋಧಕ ಸಿಬ್ಬಂದಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ. ಜಮೀರ್ ಅಹಮದ್ ರವರು ನಿರೂಪಿಸಿದರು. ಡಾ. ವಿನು ಅವರು ವಂದಿಸಿದರು

—————————ಪೂಣಚ್ಚ ಮಡಿಕೇರಿ

Leave a Reply

Your email address will not be published. Required fields are marked *

× How can I help you?