ನಾಗಮಂಗಲ;ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೆಣ್ಣು ಬ್ರೂಣ ಲಿಂಗವನ್ನು ಪತ್ತೆ ಮಾಡುತ್ತಿದ್ದ ಅಕ್ರಮ ಕೇಂದ್ರವೊಂದರ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಕ್ರಮ ಕೈಗೊಂಡಿದ್ದಾರೆ.ತಾಲೂಕಿನ ಬಿಂಡಿಗ ನವಿಲೇ ಹೋಬಳಿಯ ದೇವರ ಮಾವಿನ ಕೆರೆ ಗ್ರಾಮದ ಮನೆಯೊಂದರಲ್ಲಿ ಈ ಅಕ್ರಮ ಬ್ರೂಣ ಲಿಂಗ ಪತ್ತೆ ಕೇಂದ್ರವು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಪೋಲೀಸರ ಜೊತೆಗೂಡಿ ಈ ದಾಳಿಯನ್ನು ನಡೆಸಿದ್ದಾರೆ.
ದ್ಯಾವರಸೇಗೌಡ ತೋಟದ ಮನೆಗೆ ಹೋಗುವ ರಸ್ತೆಯಲ್ಲಿರುವ ಧನಂಜಯ ಎಂಬುವವರಿಗೆ ಸೇರಿದ್ದ ಮನೆಯೊಂದರಲ್ಲಿ ಅಕ್ರಮ ಕೇಂದ್ರ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮೊದಲಿನಿಂದಲೂ ಹಲವಾರು ದೂರುಗಳು ಕೇಳಿಬಂದಿದ್ದವು.ದೂರಿನ ಬಗ್ಗೆ ಖಚಿತ ಮಾಹಿತಿಯನ್ನು ಸಂಗ್ರಹಿಸಿದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಮೂರು ಜನ ಆರೋಪಿಗಳನ್ನು ಪೋಲೀಸರ ವಶಕ್ಕೆ ಕೊಡಿಸುವುದರ ಮೂಲಕ ದಿಟ್ಟ ಕ್ರಮ ಕೈಗೊಂಡಿರುವುದು ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಆರೋಪಿಗಳನ್ನು ತಾಲ್ಲೂಕಿನ ದೇವರಮಾವಿನಕೆರೆ ಗ್ರಾಮದ ಅಮಾಸೇಗೌಡ ಮಗ ಧನಂಜಯ್ ಅಲಿಯಾಸ್ ಕಾಶಿ,ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಗ್ರಾಮದ ಮನೋಹರ್,ಮಂಡ್ಯ ನಗರದ ಗುತ್ತಲು ನಿವಾಸಿ ನಾಗಮಣಿ ಎಂಬುವವರನ್ನು ಅಧಿಕಾರಿಗಳು ಬಂಧಿಸಿದ್ದರೆ,ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಪ್ರಮುಖ ಆರೋಪಿ ಅಭಿ ಎಂಬುವವನು ತಲೆಮರೆಸಿಕೊಂಡಿದ್ದಾನೆ.ಈ ಸಂಬಂಧ ಬೆಳ್ಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಆರೋಗ್ಯ ಇಲಾಖೆಯ ಉಪನಿರ್ದೇಶಕ ಡಾಕ್ಟರ್ ವಿವೇಕಾನಂದ, ಮಂಡ್ಯ ಜಿಲ್ಲಾ ಆರೋಗ್ಯ ಅಧಿಕಾರಿ ಡಾಕ್ಟರ್ ಮೋಹನ್,ಮಂಡ್ಯ ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿ ಬೆಟ್ಟಸ್ವಾಮಿ,ನಾಗಮಂಗಲ ಉಪವಿಭಾಗದ ಆರಕ್ಷಕ ಉಪಾಧೀಕ್ಷಕ ಡಾ ಎ.ಆರ್. ಸುಮಿತ್. ಆರಕ್ಷಕ ವೃತ್ತ ನಿರೀಕ್ಷಕ ಕೆ.ಎಸ್ ನಿರಂಜನ್.ಬೆಳ್ಳೂರು ಪೊಲೀಸ್ ಠಾಣಾಧಿಕಾರಿ ವೈ.ಎನ್. ರವಿಕುಮಾರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು