ಕೆ.ಆರ್.ಪೇಟೆ:ಸುಳ್ಳು ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಷಿಕ್ಯೂಷನ್ ತನಿಖೆಗೆ ಅನುಮತಿ ನೀಡಿರುವುದನ್ನು ಖಂಡಿಸಿ ಇದೇ ಆ.27ರಂದು ಮಂಗಳವಾರ ಬೆಳಿಗ್ಗೆ 11ಗಂಟೆಗೆ ಕರ್ನಾಟಕ ರಾಜ್ಯ ಶೋಷಿತ ವರ್ಗಗಳ ವೇದಿಕೆ ಹಾಗೂ ರಾಜ್ಯ ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ವತಿಯಿಂದ ಬೆಂಗಳೂರಿನಲ್ಲಿ ರಾಜಭವನ ಮುತ್ತಿಗೆ ಕಾರ್ಯಕ್ರಮ ಹಾಗೂ ರಾಜ್ಯಪಾಲ ಹಠಾವೋ ಚಳುವಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಸಂಚಾಲಕ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ತಿಳಿಸಿದರು.
ತಾಲ್ಲೂಕು ಅಹಿಂದ ಕಾಂಗ್ರೆಸ್ ಘಟಕ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ಪದಾಧಿಕಾರಿಗಳ ವತಿಯಿಂದ ಆಯೋಜಿಸಿದ್ದ ರಾಜಭವನ ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಶೋಷಿತ ವರ್ಗಗಳ ಹಾಗೂ ಅಹಿಂದ ಸಂಘಟನೆಗಳ ಕಾರ್ಯಕರ್ತರು,ಸಿದ್ದರಾಮಯ್ಯ ಅಭಿಮಾನಿಗಳು ಆಗಮಿಸಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯಪಾಲರ ಹುದ್ದೆ ಸಂವಿಧಾನಾತ್ಮಕ ಹುದ್ದೆಯಾಗಿದೆ.ಆದರೆ ರಾಜ್ಯಪಾಲರು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಕ್ಷದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಕೇಂದ್ರ ಸರ್ಕಾರದ ಪ್ರಧಾನಿ ಮೋದಿ, ಅಮಿತ್‌ಷಾ ಅವರ ಅಣತಿಯಂತೆ ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಕ್ರಮವನ್ನು ಖಂಡಿಸಿ ಈ ರಾಜಭವನ ಚಲೋ ಕಾರ್ಯಕ್ರಮ ಹಾಗೂ ರಾಜ್ಯಪಾಲ ಹಠಾವೋ ಚಳುವಳಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಅಹಿಂದ ವರ್ಗಗಳ ಪೂರ್ವಭಾವಿ ಸಭೆಯಲ್ಲಿ ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್,ಪ್ರದೇಶ ಕಾಂಗ್ರೆಸ್ ಸಮಿತಿಯ ತಾಲ್ಲೂಕು ಘಟಕದ ಎಸ್.ಸಿ.ವಿಭಾಗದ ಅಧ್ಯಕ್ಷ ಶಿವಣ್ಣ, ಚಿಕ್ಕಗಾಡಿಗನಹಳ್ಳಿ ರಾಜಯ್ಯ, ತಾಲ್ಲೂಕು ಡಾ.ಬಾಬು ಜಗಜೀವನರಾಂ ಸಂಘಟನೆಗಳ ಅಧ್ಯಕ್ಷ ಹೆಚ್.ಎಂ.ಪುಟ್ಟರಾಜು, ತಾಲ್ಲೂಕು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಕೆ.ಎಸ್.ಕುಮಾರ್, ಕಾಂಗ್ರೆಸ್ ಮುಖಂಡರಾದ ಮಡುವಿನಕೋಡಿ ಕಾಂತರಾಜ್, ಎ.ಬಿ.ಕುಮಾರ್, ಫಯಾಜ್(ಸೌದಿ), ನವೀದ್ ಅಹಮದ್, ಅಜ್ಮತ್ ಉಲ್ಲಾ ಷರೀಫ್, ಇಲಿಯಾಜ್ ಅಹಮದ್, ರಾಯಸಮುದ್ರ ಧನಂಜಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
————-ಮನು ಮಾಕವಳ್ಳಿ ಕೆ ಆರ್ ಪೇಟೆ