ಕೆ.ಆರ್.ಪೇಟೆ:ಮಹಾ ಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರವು ಜೀವನ ಸಾರವನ್ನು ತಿಳಿಸುತ್ತದೆ.ಶಿಷ್ಟರ ರಕ್ಷಣೆಗಾಗಿ ದುಷ್ಟರ ಸಂಹಾರ ಶ್ರೀಕೃಷ್ಣ ಲೀಲೆಗಳು ಮಕ್ಕಳಿಗೆ ಪ್ರೇರಣದಾಯಕವಾಗಲಿದೆ ಎಂದು ಹೇಮಗಿರಿ ಬಿಜಿಎಸ್ ಶಾಖಾಮಠದ ಪ್ರಧಾನ ಕಾರ್ಯದರ್ಶಿ ಡಾ.ಜೆ. ಎನ್ ರಾಮಕೃಷ್ಣೇಗೌಡ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಹೇಮಗಿರಿ ಬಿಜಿಎಸ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ಮಕ್ಕಳಿಗೆ ಕೃಷ್ಣ,ರಾಧೆ ವೇಷ-ಭೂಷಣ ಸ್ಪರ್ಧೆ ಕಾರ್ಯಕ್ರಮ ನೇತೃತ್ವವಹಿಸಿ ಅವರು ಮಾತನಾಡಿದರು.
ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಮಹಾಭಾರತ,ರಾಮಾಯಣ ಹಾಗೂ ಇತಿಹಾಸ ಪುರುಷರ ಜೀವನ ಚರಿತ್ರೆಗಳನ್ನು ತಿಳಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ.ಕಲಿಕೆಯಲ್ಲಿ ಮಕ್ಕಳಿಗೆ ಉತ್ತಮ ನೀತಿ ಪಾಠಗಳು ಹಾಗೂ ಶ್ರೀಕೃಷ್ಣ ಲೋಕ ಕಲ್ಯಾಣಕ್ಕಾಗಿ ಮಾಡಿದ ಸಾಧನೆಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು.ಮಕ್ಕಳಿಗೆ ಶ್ರೀಕೃಷ್ಣ ಮತ್ತು ರಾಧೆ ವೇಷ-ಭೂಷಣಗಳನ್ನು ಹಾಕುವ ಮೂಲಕ ಅವರಲ್ಲಿ ಉತ್ತಮ ಆಲೋಚನೆ ಮತ್ತು ಶ್ರೀ ಕೃಷ್ಣ ಪ್ರೇರಣೆಯಾಗಲಿ ಎಂದು ಈ ಸುಂದರ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.
ಬಳಿಕ ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಸ್ಪರ್ಧಿಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿ ಕೃಷ್ಣ ಜನ್ಮಾಷ್ಟಮಿಯ ಮಹತ್ವ ಮತ್ತು ಶ್ರೀಕೃಷ್ಣನ ಸಾಧನೆ ಇತಿಹಾಸದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ಅಗ್ರಹಾರಬಾಚಳ್ಳಿ ಶ್ರೀನಿವಾಸ ಸಜ್ಜನ್, ಜಿ.ಪಿ ರಾಜು, ಹೇಮಗಿರಿ, ಬಿಜಿಎಸ್ ಶಾಲಾ ಪ್ರಾಂಶುಪಾಲ ಆನಂದ್, ಶಾಲಾ ಶಿಕ್ಷಕರು ಮಕ್ಕಳು ಪೋಷಕರಿದ್ದರು.
—-ಮನು ಮಾಕವಳ್ಳಿ ಕೆ ಆರ್ ಪೇಟೆ