ಕೆ.ಆರ್.ಪೇಟೆ:ರೈತರು ಸಕಾಲಕ್ಕೆ ರಾಸುಗಳ ಆರೋಗ್ಯ ತಪಾಸಣೆ ಮಾಡಿಸಿ ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ಕೊಡಬೇಕು ಎಂದು ಮನ್ಮುಲ್ ನಿರ್ದೇಶಕ ಹಾಗೂ ಶಾಸಕರಾದ ಹೆಚ್.ಟಿ ಮಂಜು ಹೇಳಿದರು.
ತಾಲೂಕಿನ ಊಚನಹಳ್ಳಿ ಉತ್ಪಾದಕರ ಸಹಕಾರ ಮಹಿಳಾ ಸಂಘಗಳ ಆವರಣದಲ್ಲಿ ನಡೆದ 2023-24 ನೇ ಸಾಲಿನ ಸರ್ವಸದಸ್ಯ ವಾರ್ಷಿಕ ಮಹಾಸಭೆಯ ಉದ್ಘಾಟಿಸಿ ಮಾತನಾಡಿದರು.
ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯು ರೈತರ ಪ್ರಮುಖ ಆದಾಯ ಮೂಲವಾಗಿದೆ ಹೈನೋದ್ಯಮ ಮತ್ತಷ್ಟು ಅಭಿವೃದ್ಧಿಪಡಿಸಲು ಗುಣಮಟ್ಟದ ಹಾಲು ಸರಬರಾಜು ಮಾಡಬೇಕು.ಹೈನುಗಾರಿಕೆ ಜತೆಗೆ ಉಪ ಕಸುಬಾಗಿ ಕುರಿ,ಮೇಕೆ ಸಾಕಾಣಿಕೆ ಮಾಡಬೇಕು.ಇದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಗಳಿಸಬಹುದು’ಎಂದು ಕಿವಿಮಾತು ಹೇಳಿದರು.
‘ರೈತರ ಕೃಷಿ ಭೂಮಿಯ ಫಲವತ್ತತೆಗೆ ಜಾನುವಾರುಗಳು ಅತಿ ಮುಖ್ಯ.ಗ್ರಾಮಗಳಲ್ಲಿ ಇಂದಿಗೂ ಹಳೇ ವಿಧಾನದಲ್ಲೇ ಪಶು ಸಂಗೋಪನೆ ಮಾಡುತ್ತಿದ್ದಾರೆ.ಇದರಿಂದ ಆರ್ಥಿಕವಾಗಿ ಸಶಕ್ತರಾಗಲು ಸಾಧ್ಯವಾಗುತ್ತಿಲ್ಲ.ಆದ ಕಾರಣ ಪಶು ಸಂಗೋಪನೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ ರಾಸುಗಳನ್ನು ಸಾಕುವುದು ರೈತರಿಗೆ ದೊಡ್ಡ ಸವಾಲಾಗಿದೆ.ಆಧುನಿಕ ಪದ್ಧತಿಯಲ್ಲಿ ಪಶು ಸಂಗೋಪನೆ ಮಾಡಿದರೆ ರಾಸುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯವಂತ ಕರುಗಳನ್ನು ಪಡೆಯಬಹುದು.ಜತೆಗೆ ಹಾಲು ಉತ್ಪಾದನೆ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಮಾರ್ಗ ವಿಸ್ತರಣಾಧಿಕಾರಿ ನಾಗಪ್ಪ ಅಲ್ಲಿಬಾದಿ ವಾರ್ಷಿ ವರದಿ ಮಂಡಿಸಿದರು.2023-24ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮತ್ತು ಅದರ ನ್ಯೂನತೆಗಳಿಗೆ ಮಂಡಳಿಯ ಅನುಪಾಲನಾ ವರದಿ ಪರಿಶೀಲಿಸುವುದು,ಅಯ-ವ್ಯಯದ ಅನುಮೋದನೆ ಮತ್ತು ಹಿಂದಿನ ಸಾಲಿನಲ್ಲಿ ಅಯ ವ್ಯಯಕ್ಕಿಂತ ಹೆಚ್ಚಾದ ಬಾಬ್ತುಗಳಿಗೆ ಅನುಮೋದನೆ ನೀಡುವುದು,ಗರಿಷ್ಠ ಷೇರು ಮಿತಿ ನಿಗದಿ ಪಡಿಸುವುದು,ಹೀಗೆ ನಾನಾ ವಿಷಯಗಳನ್ನು ಚರ್ಚಿಸಲಾಯಿತು.
ಸಭೆಯಲ್ಲಿ ಊಚನಹಳ್ಳಿ ಡೇರಿ ಅಧ್ಯಕ್ಷೆ ಮಮತಾ ಕೃಷ್ಣೇಗೌಡ,ಉಪಾಧ್ಯಕ್ಷ ಮಂಜುಳಾ ಚೆಲುವರಾಜ್, ನಿರ್ದೇಶಕರುಗಳಾದ ನಿರ್ಮಲ, ಶಶಿಕರ, ಮಂಜುಳಾ, ಲತಾ, ಸವಿತಾ, ರೂಪ ಸಂಘದ ಕಾರ್ಯದರ್ಶಿ ಭಾಗ್ಯ ಸೆರೆದಂತೆ ಅನೇಕರು ಉಪಸ್ಥಿತರಿದ್ದರು.
——– ಮನು ಮಾಕವಳ್ಳಿ ಕೆ ಆರ್ ಪೇಟೆ