ನಾಗಮಂಗಲ:ಅಂತರಂಗದಲ್ಲಿ ಘನಸಂಪತ್ತಿದ್ದರೆ ಬಹಿರಂಗದಲ್ಲಿ ಸಾಧನೆ ಸಾಧ್ಯ.ಇಲ್ಲವಾದರೆ ಭೋಳೆತನವಾಗುತ್ತದೆ. ಪ್ರತಿಯೊಬ್ಬರೂ ಸಮಾಜದ ಪರಿಧಿಗೆ ಬಂದಾಗ ನೈಜ ಬದುಕಿನ ಅನಾವರಣವಾಗುತ್ತದೆ ಎಂದು ಮಂಡ್ಯ ಜಿಲ್ಲಾ ಪಂಚಾಯ್ತಿ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾಲಕ್ಕಿಗೌಡ ಅಭಿಪ್ರಾಯ ಪಟ್ಟರು.
ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಪ್ರಥಮ ಬಿ.ಎ ವಿದ್ಯಾರ್ಥಿಗಳಿಗೆ ದ್ವಿತೀಯ ಮತ್ತು ಅಂತಿಮ ಬಿ.ಎ ಪದವಿ ವಿದ್ಯಾರ್ಥಿಗಳು ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಸನ್ನಿವೇಶವನ್ನು ಅವಲೋಕಿಸಿದಾಗ ಬಾಲಕಿಯರಲ್ಲಿ ಆತ್ಮಸ್ಥೈರ್ಯ ಮತ್ತು ಬಾಲಕರಲ್ಲಿ ಕೀಳರಿಮೆ ಹೆಚ್ಚಿದೆ.
ತಂದೆ ತಾಯಿಗಳು ಬದ್ಧತೆಯಿಂದ ನಿಮ್ಮನ್ನು ಓದಿಸಿ ಬೆಳೆಸುತ್ತಾರೆ ಅದೇ ರೀತಿ ನಿಮ್ಮ ಕರ್ತವ್ಯ ನೀವು ಪ್ರಾಮಾಣಿಕತೆಯಿಂದ ಮಾಡುವವರಂತಾಗಬೇಕು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶ ಹೇರಳವಾಗಿವೆ.ಈ ಪದವಿ ವ್ಯಾಸಂಗದಲ್ಲಿಯೇ ನಿಮ್ಮ ಗುರಿಯ ಬಗ್ಗೆಸ್ಪಷ್ಟತೆ ಇರಬೇಕು. ಓದುವ ಜೊತೆಗೆ ಬುದ್ಧಿಯು ಬೇಕು.ನಾವು ಹೇಗೆ ಬದುಕಬೇಕು ಎಂಬುದನ್ನು ನಮಗೆ ಮಾರ್ಗದರ್ಶನ ಮಾಡುವುದು ವಿದ್ಯೆಯೇ.ಪದವಿ ತರಗತಿಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಗೆ ತಯಾರಾಗಿ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಸ್ಪಷ್ಟ ಮಾಹಿತಿ ಇರಲಿ ವಿಜ್ಞಾನ ಗಣಿತ ವಿಷಯಗಳು ಎಸ್ಎಸ್ಎಲ್ಸಿ ತತ್ಸಮಾನ ವಿಷಯಗಳೇ ಆಗಿರುತ್ತವೆ. ಶ್ರದ್ಧೆ ಮುಖ್ಯ ಮೊದಲು ನೀವು ಗುರಿಯನ್ನು ನಿರ್ಧರಿಸಿ ನಂತರ ಅದನ್ನು ಸಾಕಾರಗೊಳಿಸಲು ನೂರು ದಾರಿ ಸಿಗುತ್ತವೆ ಎಂದು ಸಲಹೆ ನೀಡಿದರು.
ಕಲಾ ವಿಭಾಗದ ವಿದ್ಯಾರ್ಥಿಗಳು ಸಮಾಜದಲ್ಲಿ ಸಂವಹನ ಸಾಧಿಸುವುದು ಸುಲಭ. ಸಾಮಾಜಿಕ ಜಾಲತಾಣ ಇಂದು ಯುವಪೀಳಿಗೆಯನ್ನು ತಮ್ಮ ಗುರಿಯಿಂದ ವಿಮುಖರನ್ನಾಗಿಸುತ್ತಿದೆ.ಸಮಯಪಾಲನೆ ಸಮಯದ ಸದ್ವಿನಿಯೋಗ ವಿದ್ಯಾರ್ಥಿಗಳಲ್ಲಿ ಬಹು ಮುಖ್ಯ.ಪ್ರತಿಯೊಬ್ಬರು ವಿಶ್ವಮಾನವ ಸಂದೇಶವನ್ನು ಅರಗಿಸಿಕೊಳ್ಳಬೇಕು.ಸಾಧನೆ ಅಷ್ಟೇ ಅಂತಿಮವಲ್ಲ ಸಾಧನೆಯ ಜೊತೆಗೆ ಮಾನವೀಯತೆ ಬಹಳ ಮುಖ್ಯ.ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಬದುಕನ್ನು ವಿವಿಧ ಆಯಾಮಗಳಿಂದ ಅವಲೋಕಿಸುವ ಗುಣ ನಿಮ್ಮದಾಗಲಿ. ಸಮಾಜಕ್ಕೆ ಉತ್ತಮ ಕೊಡುಗೆಗಳಾಗಿ. ನಿಮ್ಮನ್ನು ನೀವು ಮಾತ್ರ ಪ್ರೇರೇಪಿಸಲು ಸಾಧ್ಯ ಎಂದು ಕರೆ ಕೊಟ್ಟರು.
ಪ್ರಸ್ತುತ ಸರ್ಕಾರದ ಯೋಜನೆ,ಗ್ರಾಮ ಪಂಚಾಯತಿ ಕಾರ್ಯ ವೈಖರಿ ಹೀಗೆ ಹತ್ತು ಹಲವು ಜ್ವಲಂತ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಯಾಲಕ್ಕಿಗೌಡ ಸಂವಾದದ ಮೂಲಕ ಉತ್ತರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ಮಾತನಾಡಿ ವಾದದಿಂದ ಅಹಂಕಾರ ಸಂವಾದದಿಂದ ಸೃಜನಶೀಲ ವಿಚಾರ ಸೃಷ್ಟಿ ಆಗುತ್ತದೆ. ನಮ್ಮ ನಡವಳಿಕೆ ಪ್ರಾಮಾಣಿಕವಾಗಿರಬೇಕು. ಬದಲಾವಣೆ ಬಯಸುವ ನಾವು ಮೊದಲು ಪ್ರಾಮಾಣಿಕವಾಗಿ ಬದಲಾಗಬೇಕು. ವಿದ್ಯಾರ್ಥಿಗಳ ನೈಜ ನಡೆ ಮಾತುಗಳಿಂದ ಅವರ ಬದುಕು ಸುಂದರವಾಗಿ ಅನಾವರಣವಾಗುತ್ತದೆ ಎಂದರು.
ಆಂಗ್ಲಭಾಷಾ ಉಪನ್ಯಾಸಕ ಎ.ರಘುನಾಥ್ ಸಿಂಗ್ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಬಿ.ಎಚ್.ಕಾವ್ಯ ವಿದ್ಯಾರ್ಥಿಗಳಿಗೆ ಹಿತನುಡಿಗಳಾಡಿದರು.
—————-ಬಿ ಹೆಚ್ ರವಿ