ನಾಗಮಂಗಲ:ಸೌರಮಂಡಲದಲ್ಲಿ ಭೂಮಿಯನ್ನು ಹೊರತುಪಡಿಸಿ ಇನ್ಯಾವುದೇ ಗ್ರಹದಲ್ಲಿ ನಾವು ವಾಸಿಸಲು ಸಾಧ್ಯವಿಲ್ಲ.ಇರುವ ತಂತ್ರಜ್ಞಾನ ಬಳಸಿದರು ಬೇರೆ ಗ್ರಹಕ್ಕೆ ಹೋಗಲು ನೂರಾರು ವರ್ಷಗಳೆ ಬೇಕು.ಒಂದು ವೇಳೆ ತಂತ್ರಜ್ಞಾನದ ಅಪರಿಮಿತ ಸಾಧನೆಯಿಂದ ಅನ್ಯಗ್ರಹಕ್ಕೆ ಹೋದರು ಅಲ್ಲಿ ವಾಸಿಸಲು ಯೋಗ್ಯವಾದ ಪರಿಸ್ಥಿತಿ ಇದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಕೂಡ ಇಲ್ಲ. ಹಾಗಾಗಿ ನಾವು ಇರುವ ಭೂಮಿಯನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಿದೆ.ಸಾಧ್ಯವಾದಷ್ಟು ಪ್ರಮಾಣದಲ್ಲಿ ಪರಿಸರ ಸಂರಕ್ಷಣೆ ಹಾಗೂ ಹಸಿರು ಮನೆ ಪರಿಣಾಮದ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ಇಸ್ರೋ ವಿಜ್ಞಾನ ಕಾರ್ಯಕ್ರಮ ವಿಭಾಗದ ಉಪ ನಿರ್ದೇಶಕ ಡಾ.ವಿ.ಗಿರೀಶ್ ತಿಳಿಸಿದರು.
ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ವಿಜ್ಞಾನ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಚಂದ್ರನನ್ನು ಸ್ಪರ್ಶಿಸುವ ಜೊತೆಗೆ ಜೀವನವನ್ನು ಸ್ಪರ್ಶಿಸುವುದು ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಮನುಷ್ಯ ವಾಸಿಸಲು ಯೋಗ್ಯವಾದ ಜಾಗ ಎಂದರೆ ಅದು ಭೂಮಿ ಮಾತ್ರ.ಮನುಕುಲಕ್ಕೆ ಅತ್ಯಂತ ಯೋಗ್ಯವಾದ ವಾತಾವರಣ ಹೊಂದಿರುವ ಒಂದೇ ಒಂದು ಗ್ರಹ ಭೂಮಿ.ವಾತಾವರಣದ ಉಷ್ಣತೆ,ಒತ್ತಡ,ಹಗಲು, ರಾತ್ರಿ, ತಾಪಮಾನ ಎಲ್ಲವು ಭೂಮಿಯಲ್ಲಿ ಮನುಕುಲ ವಾಸಿಸಲು ಯೋಗ್ಯವಾಗಿರುವಂತದ್ದು ಎಂದರು.
ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ಬಗೆಗೆ ಅರಿವು ಮೂಡಿಸಿದರು.
ತುರುವೆಕೆರೆ ತಾಲ್ಲೂಕಿನ ರಾಮಕೃಷ್ಣಾಶ್ರಮದ ಧರ್ಮವೃತಾನಂದ ಸ್ವಾಮೀಜಿ ಮಾತನಾಡಿ ಹೊರಗಡೆ, ಪ್ರಪಂಚವನ್ನು ಬಹಳ ನೋಡುತ್ತಿದ್ದೇವೆ ನಮ್ಮ ಆಂತರ್ಯದೊಳಗೆ ಎಲ್ಲಿ ಹೋಗುತ್ತಿದ್ದೇವೆ ಎನ್ನುವುದು ಅಗತ್ಯ.ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ ಮತ್ತು ಅನಿವಾರ್ಯ ಕೂಡ.ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದು ಕಠಿಣ ಕೆಲಸ.ನಮ್ಮೊಳಗಿನ ಪ್ರಪಂಚ ಅತ್ಯಂತ ಅದ್ಭುತವಾದುದು.ನಮ್ಮ ಆಂತರ್ಯ ಪ್ರಪಂಚ ಮುಟ್ಟಿದಾಗ ಶಕ್ತಿ ಜಾಗೃತವಾಗುತ್ತದೆ.ಆ ಶಕ್ತಿ ಅಪರಿಮಿತವಾದುದು.ಆ ಶಕ್ತಿ ಸಾಕಾರವಾದರೆ ನಾವು ಏನನ್ನು ಬೇಕಾದರು ಸಾಧಿಸಬಹುದು. ನನ್ನನ್ನು ನಾವು ಅರಿತಾಗ ಮಾತ್ರ ನಿಜವಾದ ಬದಲಾವಣೆ.ನಮ್ಮೊಳಗೆ ನಾವು ಸಂಶೋಧನೆ ಮಾಡುವಂತಾಗಬೇಕು. ವಿದ್ಯಾರ್ಥಿಗಳು ಪ್ರತಿನಿತ್ಯ ೧೦ ನಿಮಿಷ ಧ್ಯಾನ ಮಾಡಿ. ನಿಮ್ಮ ಬದುಕನ್ನು ರೂಪಿಸಿಕೊಳ್ಳಿ ಎಂದು ಆಶೀರ್ವದಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ಅಧ್ಯಕ್ಷೀಯ ನುಡಿಗಳಾಡುತ್ತಾ, ನಮ್ಮ ಬದುಕಿನಲ್ಲಿ ತಂತ್ರಜ್ಞಾನ ಬಹಳಷ್ಟು ಪ್ರಭಾವಶಾಲಿಯಾದುದು. ಬಾಹ್ಯಾಕಾಶ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಧಿಸಿದ ಸಾಧನೆ ಇಸ್ರೋಗೆ ಸಲ್ಲುತ್ತದೆ. ವಿಜ್ಞಾನದ ನಿಗೂಢತೆಯನ್ನು ಎಳೆ ಎಳೆಯಾಗಿ ಅಧ್ಯಯನ ಮಾಡುವುದೇ ಕೌತುಕ.ಅದೊಂದು ರೋಚಕ ಪಯಣ. ಇಂದಿನ ನಿಮ್ಮ ಕ್ರಿಯೆ ಭವಿಷ್ಯದ ನಿಮ್ಮ ಬದುಕು ಹೇಗೆ ರೂಪಿಸಲ್ಪಡುತ್ತದೆ ಎಂದು ನಿರ್ಧಾರ ವಾಗುತ್ತದೆ. ಜ್ಞಾನದ ಜೊತೆ ಜೊತೆಗೆ ವಿಜ್ಞಾನ ಮೇಳೈಸಿದಾಗ ಬದುಕು ಬಹಳ ಅರ್ಥಪೂರ್ಣ ಎಂದರು.
ಬೆಂಗಳೂರಿನ ಉದಯಭಾನು ಕಲಾ ಸಂಘದ ಜಂಟಿ ಕಾರ್ಯದರ್ಶಿ ಕೆ.ಎನ್.ಸೋಮಶೇಖರ್ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ೧೨ ಕ್ಯಾಲ್ಕುಲೇಟರ್ ಹಾಗೂ ವಿಜ್ಞಾನ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆ ನೀಡಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬ್ರಹ್ಮಚಾರಿ ಸತ್ಕೀರ್ತಿನಾಥ ಜೀ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ರಾಮಕೃಷ್ಣಾಶ್ರಮದ ವಿಶ್ವವಿದಾನಂದ ಸ್ವಾಮೀಜಿ , ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಎಚ್.ಟಿ. ಕೃಷ್ಣೇಗೌಡ ಉಪಸ್ಥಿತರಿದ್ದರು.ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಗುಣವತಿ ಕಾರ್ಯಕ್ರಮ ನಿರೂಪಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಬೋರೇಗೌಡ ಸ್ವಾಗತಿಸಿ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ನೇತ್ರಾವತಿ ವಂದಿಸಿದರು.