ಬೇಲೂರು;ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ) ರವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಅವರ ಕೋಟ್ಯಾಂತರ ಅನುಯಾಯಿಗಳ ಮನಸ್ಸುಗಳಿಗೆ ಘಾಸಿ ಮಾಡಿರುವ ಮಹಾರಾಷ್ಟರ ರಾಮಗಿರಿ ಸ್ವಾಮೀಜಿಯನ್ನು ಬಂಧಿಸಿ ಜೈಲಿಗಟ್ಟಬೇಕೆಂದು ತಾಲೂಕಿನ ಮುಸಲ್ಮಾನ ಸಮುದಾಯದ ಮುಖಂಡರು ಆಗ್ರಹಿಸಿದರು.
ತಾಲೂಕು ದಂಡಾಧಿಕಾರಿಗಳ ಕಚೇರಿಯ ಮುಂದೆ ಸಭೆ ಸೇರಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರಕ್ಕೆ ಮನವಿ ಪತ್ರವನ್ನು ನೀಡಲಾಯಿತು.
ನಂತರ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ನಗರದ ಜಾಮಿಯಾ ಮಸೀದಿಯ ಕಾರ್ಯದರ್ಶಿ ಇಮ್ರಾನ್ ಮಹಾರಾಷ್ಟ್ರದ ರಾಮಗಿರಿ ಸ್ವಾಮೀಜಿ ಪ್ರವಾದಿಗಳ ವಿರುದ್ಧ ಅತ್ಯಂತ ಅವಹೇಳನಕಾರಿ ಹೇಳಿಕೆಯನ್ನು ನೀಡಿ ದುಷ್ಟತನ ಮೆರೆದಿದ್ದಾರೆ.ಆತನನ್ನು ಕೂಡಲೇ ಬಂಧಿಸಿ ಕಠಿಣಾತಿ ಕಠಿಣ ಕ್ರಮವನ್ನು ಜರುಗಿಸಬೇಕು.ಹಿಂದೆಲ್ಲ ಪ್ರವಾದಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರ ವಿರುದ್ಧ ಆಯಾ ಸರಕಾರಗಳು ನಿರ್ದಾಕ್ಷಿಣ್ಯ ಕ್ರಮಗಳನ್ನು ತೆಗೆದುಕೊಂಡಿದ್ದರೆ ಸ್ವಾಮೀಜಿಗೆ ಹಾಗೆ ಮಾತನಾಡುವ ಧೈರ್ಯ ಬರುತ್ತಿರಲಿಲ್ಲ.ಕೂಡಲೇ ಕೇಂದ್ರ ಸರಕಾರ ಮದ್ಯ ಪ್ರವೇಶಿಸಿ ಆತನನ್ನು ಬಂಧಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ನಿರ್ದೇಶನ ಕೊಡಬೇಕು ಎಂದು ಆಗ್ರಹಿಸಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಅಹಮದ್ ಅಲಿಖಾನ್ ಮಾತನಾಡಿ ರಾಮಗಿರಿ ಸ್ವಾಮೀಜಿಯಂತಹ ದೂರ್ತರು ಎಲ್ಲಾ ಧರ್ಮಗಳಿಗೂ ಅಪಾಯಕಾರಿಯೇ.ಕೋಟ್ಯಾಂತರ ಜನ ಪ್ರವಾದಿಗಳ ಹಿಂಬಾಲಕರಿಗೆ ನೋವಾಗುವಂತಹ ಹೇಳಿಕೆಯನ್ನು ಆತ ನೀಡಿದ್ದಾರೆ.ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಸಮಾಜದ ಮದ್ಯೆ ಅಶಾಂತಿ ಸೃಷ್ಟಿಸುವ ಹುನ್ನಾರ ಮಾಡುವ ಯಾರೇ ಆಗಿರಲಿ ಅಂತಹವರ ವಿರುದ್ಧ ಕ್ರಮಗಳು ಆಗಬೇಕು ಎಂದರು.
ಈ ಸಂದರ್ಭದಲ್ಲಿ ಪೇಟೆ ಜಾಮಿಯ ಮಸೀದಿಯ ಅಧ್ಯಕ್ಷರಾದ ಅಸ್ಲಾಂ,ಮಸೀದಿಯ ಧರ್ಮ ಗುರುಗಳು ತಾಲೂಕಿನ ಎಲ್ಲಾ ಮಸೀದಿಯ ಅಧ್ಯಕ್ಷರು, ಕಾರ್ಯದರ್ಶಿಗಳು,ಜಮಾತರಜಾಯಿ ಮುಸ್ತಫ ಸಂಘಟನೆಯ ತಾಲೂಕು ಅಧ್ಯಕ್ಷ ಜಾಫರ್, ಸುಹೀಲ್, ಶಿರಾಜ್,ಸಿಕಂದರ್,ಜಾವಿದ್,ಇಸ್ರಾರ್,ಪುರಸಭೆ ಸದಸ್ಯ ಫಯಾಜ್ ಅಹ್ಮದ್,ಸಮಾಜ ಸೇವಕ ನೂರ್ ಅಹಮ್ಮದ್ ಹಾಜರಿದ್ದರು.
———————-ನೂರ್ ಅಹಮ್ಮದ್