ಬೇಲೂರು;-ಪ್ರಸಕ್ತ ದಿನಮಾನದಲ್ಲಿ ವಯೋವೃದ್ಧರ ಬಗ್ಗೆ ಯುವ ಪೀಳಿಗೆ ನಿರಾಶಕ್ತಿ ಹೊಂದಿದ ಕಾರಣದಿಂದಲೇ ಅವರುಗಳು ಬದುಕಿನಲ್ಲಿ ಏರುಪೇರು ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ.ವಯೋವೃದ್ಧರು ಎಂದಿಗೂ ನಿರುಪಯುಕ್ತರಲ್ಲ ಬದಲಾಗಿ ಭವ್ಯ ಸಮಾಜದ ಅಮೂಲ್ಯವಾದ ಸಂಪತ್ತು ಎಂದು ಯುವ ಪೀಳಿಗೆ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ಬೇಲೂರು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಚಂದ್ರಮೌಳಿ ಹೇಳಿದರು.
ಪಟ್ಟಣದ ಕಾವೇರಿ ಕ್ಲಿನಿಕ್ ಅವರಣದಲ್ಲಿ ಬೇಲೂರು ಲಯನ್ಸ್ ಕ್ಲಬ್ ಇವರ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ಗೌರವ ಅಭಿನಂದನೆ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಅವರು,ಹಿರಿಯ ನಾಗರಿಕರು ಒಂದು ತಲೆಮಾರಿನ ಹಿಂದಿನವರೆಗೂ ನಮ್ಮ ಕುಟುಂಬಗಳ ಬೆಳವಣಿಗೆ ನೊಗ ಹೊತ್ತವರು,ದುಡಿಯುವ ವಯಸ್ಸಿನಲ್ಲಿ ದುಡಿದು ನಮಗೆ ದಾರಿದೀಪವಾಗಿದ್ದಾರೆ. ಒಂದು ದಿನವನ್ನು ಕೂಡ ವ್ಯರ್ಥ್ಯದಿಂದ ಕಳೆಯದೆ ಇಡೀ ಬದುಕನ್ನು ಕುಟುಂಬಕ್ಕಾಗಿ ಮುಡಿಪಾಗಿಟ್ಟ ಇಂತಹ ಹಿರಿಯರ ಮಾರ್ಗದರ್ಶನ ಎಲ್ಲರಿಗೂ ಅಗತ್ಯವಾಗಿದೆ.ಇಂದಿನ ವೇಗದ ಜೀವನದಲ್ಲಿ ಯುವಜನತೆ ದಾರಿತಪ್ಪಿದ ಸಂದರ್ಭದಲ್ಲಿ ಅವರಿಗೆ ಸನ್ಮಾರ್ಗ ತೋರುವ ಶಕ್ತಿ ಉಳ್ಳವರು ಹಿರಿಯ ಜೀವಿಗಳು ಎಂಬ ತಿಳುವಳಿಕೆ ಬರಬೇಕಿದೆ.ಈ ನಿಟ್ಟಿನಲ್ಲಿ ಬೇಲೂರು ಲಯನ್ಸ್ ಸಂಸ್ಥೆ ಮುಂದಿನ ದಿನದಲ್ಲಿ ಹಿರಿಯ ನಾಗರಿಕರಿಗೆ ವಿಶೇಷವಾಗಿ ಕಾರ್ಯಕ್ರಮಗಳನ್ನು ರೂಪಿಸುವ ಯೋಜನೆ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಂ.ಪಿ.ಪೂವಯ್ಯ ಮಾತನಾಡಿ,ಹಿರಿಯರು ಗಳಿಸಿದ ಸಂಪತ್ತು ಮಕ್ಕಳಿಗೆ ಬೇಕು,ಆದರೆ ಅವರನ್ನು ಪೋಷಿಸುವುದು ಮಾತ್ರ ಆಗುವುದಿಲ್ಲ.ಈ ಕಾರಣಕ್ಕೆ ಇಂದು ಸಾವಿರಾರು ಅನಾಥಾಶ್ರಮಗಳ ಉಗಮವಾಗಿದೆ. ಕೆಲವರು ತಮ್ಮ ಪೋಷಕರ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿದ್ದು,ಹಿರಿಯ ನಾಗರಿಕರು ಸಂಕಷ್ಟದಲ್ಲಿ ಬದುಕು ಸಾಗಿಸುವ ದುಸ್ಥಿತಿ ಬಂದಿದೆ.ಈಗಾಗಲೇ ಸುಪ್ರಿಂಕೋರ್ಟ ವಯೋವೃದ್ಧರನ್ನು ಕಡೆಗಣಿಸಿದರೆ ಮಕ್ಕಳಿಗೆ ನೀಡಿದ ಆಸ್ತಿಯನ್ನು ವಾಪಸ್ಸು ಪಡೆಯುವ ಮತ್ತು ಅವರನ್ನು ಪೋಷಣೆ ಮಾಡಬೇಕು ಎಂಬ ಸುತ್ತೋಲೆ ನೀಡಿದೆ.ಸರ್ವರು ಕೂಡ ಹಿರಿಯ ನಾಗರಿಕರ ಬಗ್ಗೆ ಗೌರವಾಭಿಮಾನ ಬೆಳೆಸಿಕೊಳ್ಳಬೇಕು.ವಿಶೇಷವಾಗಿ ಹಿರಿಯ ನಾಗರಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ಹೊಂದಬೇಕಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬೇಲೂರು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ವೈ.ಬಿ.ಸುರೇಶ್, ಪದಾಧಿಕಾರಿಗಳಾದ ಪುಟ್ಟಸ್ವಾಮಿ, ಸಂತೋಷ್, ಅದರ್ಶ, ವಿನೋದಪ್ರಭಾಕರ್, ಸ್ವರ್ಣಶ್ರೀನಿವಾಸ್, ನೌಷದ್, ಕಾವೇರಿ ಡಯಾಗ್ನಾಸ್ಟಿಕ್ ನ ಅಫ್ರಿದ್ ಮತ್ತು ಕಾವೇರಿ ಕ್ಲಿನಿಕ್ ಸಿಬ್ಬಂದಿಗಳು ಹಾಜರಿದ್ದರು.
———————————–ನೂರ್ ಅಹಮ್ಮದ್