ಮಂಡ್ಯ-ವಿದ್ಯಾವಂತರಿಂದ ಹಿಡಿದು ಅವಿದ್ಯಾವಂತರವರೆಗೂ ಪರಿಚಿತವಾದ ಕವಿ ಎಂದರೆ ಕವಿ ಸರ್ವಜ್ಞ ಇದಕ್ಕೆ ಕಾರಣ ಅವರು ಸುಲಭವಾಗಿ ಜನರಿಗೆ ಅರ್ಥವಾಗುವ ರೀತಿ ರಚಿಸಿರುವ ತ್ರಿಪದಿಗಳು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಅಭಿಪ್ರಾಯಪಟ್ಟರು.
ಇಂದು (ಫೆ 20) ರಂದು ಕರ್ನಾಟಕ ಸಂಘದಲ್ಲಿ ಆಯೋಜಿಸಲಾಗಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ವಜ್ಞರ ತ್ರಿಪದಿಯ ಮೌಲ್ಯ ಎಷ್ಟೆಂದರೆ ಜನರು ಇಂದಿಗೂ ತ್ರಿಪದಿಗಳನ್ನು ಮೆಲುಕು ಹಾಕುತ್ತಾರೆ. ಕೇವಲ ಮೂರು ಸಾಲಿನ ತ್ರಿಪದಿಯಲ್ಲಿ ಬದುಕಿನ ಅರ್ಥವನ್ನು ಸರಳವಾಗಿ ತಿಳಿಸುವ ಅವರ ಚಿಂತನೆ ನಿಜಕ್ಕೂ ಶ್ಲಾಘನೀಯವಾದದ್ದು ಎಂದರು.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಹಾಗೆ ಸರ್ವಜ್ಞನವರು ಅರಿಯದ ವಿಷಯವಿಲ್ಲ ಬದುಕಿನ ಪ್ರತಿಗಟ್ಟವನ್ನು ತಮ್ಮ ತ್ರಿಪದಿಯ ಮೂಲಕ ತಿಳಿಸಿದ್ದಾರೆ. ಅವರ ತ್ರಿಪದಿಯ ಮೌಲ್ಯ, ಉದ್ದೇಶ, ಆದರ್ಶಗಳನ್ನು ನಾವು ಇಂದಿಗೂ ಪಾಲಿಸಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಕರ್ನಾಟಕದ ಇತಿಹಾಸದಲ್ಲಿಯೇ ಶ್ರೇಷ್ಠವಾದ ಯುಗ ಎಂದರೆ 16 ನೇ ಶತಮಾನ ಆ ಒಂದು ಶತಮಾನದ ಶ್ರೇಷ್ಠ ವಚನಕಾರ ಸರ್ವಜ್ಞ ಅವರು ಎಂದರೆ ತಪ್ಪಾಗುವುದಿಲ್ಲ, ತಮ್ಮ ತ್ರಿಪದಿಯ ಮೂಲಕ ಸಾಹಿತ್ಯಕ್ಕೆ ಮತ್ತು ಸಮಾಜಕ್ಕೆ ಅವರು ನೀಡಿರುವ ಕೊಡುಗೆ ನಿಜಕ್ಕೂ ಅಪಾರ ಎಂದರು.

ಇವರ ವಚನದ ಉದ್ದೇಶ ಆಲೋಚನೆಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಮ್ಮ ಮುಂದಿನ ಪೀಳಿಗೆಯಲ್ಲೂ ಇವರ ಬಗ್ಗೆ ಹೆಚ್ಚಾಗಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ 16 ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಮೂಹ ಸಂಪನ್ಮೂಲ ವ್ಯಕ್ತಿ ಚಿಕ್ಕವೀರಯ್ಯ ಟಿ.ಎನ್ ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಸಕ್ಕರೆ ಕಂಪನಿ ನಿಯಮಿತ ಅಧ್ಯಕ್ಷರಾದ ಸಿ. ಡಿ ಗಂಗಾಧರ್, ದೇವರಾಜು ಅರಸು ಹಿಂದುಳಿದ ವರ್ಗಗಳಬ ವೇದಿಕೆಯ ಅಧ್ಯಕ್ಷ ಸಂದೇಶ್ ಮತ್ತು ಕುಂಬಾರರ ಸಂಘದ ಅಧ್ಯಕ್ಷ ಎಂ. ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.