ಮಾರೇನಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ: ಕುಮಾರ್ ಭೇಟಿ-ಗ್ರಾಮಸ್ಥರಿಗೆ ಅಭಯ

ಕೆ.ಆರ್.ಪೇಟೆ:ಮಾರೇನಹಳ್ಳಿ ಗ್ರಾಮದ ಜನತೆ ಭಯಪಡುವ ಅಗತ್ಯವಿಲ್ಲ ನಿಮ್ಮ ಹಿತ ಕಾಪಾಡಲು ಮಂಡ್ಯ ಜಿಲ್ಲಾ ಮತ್ತು ಕೆ. ಆರ್ ಪೇಟೆ ತಾಲೂಕು ಆಡಳಿತ ಸದಾ ಸಿದ್ದರಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ: ಕುಮಾರ್ ತಿಳಿಸಿದರು .

ತಾಲ್ಲೂಕು ಸಂತೆಬಾಚಹಳ್ಳಿ ಹೋಬಳಿಯ ಭಾರತಿಪುರ ಕ್ರಾಸ್ ಗ್ರಾ.ಪಂ ವ್ಯಾಪ್ತಿಗೆ ಬರುವ ಮಾರೇನಹಳ್ಳಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ ತೀವ್ರ ವಾಂತಿ ಭೇದಿಯಿಂದ ಇಬ್ಬರು ವಯೋವೃದ್ದರೂ ಮೃತಪಟ್ಟು,ಉಳಿದ ಮಂದಿ ಹಾಸನ ಚನ್ನರಾಯಪಟ್ಟಣ ಶ್ರವಣಬೆಳಗೊಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸದ್ದರು.ಈ ಸಂಬಂಧ ಪತ್ರಿಕೆಗಳಲ್ಲಿ ವರದಿಗಳು [ಪ್ರಕಟಗೊಂಡು ತೀವ್ರ ಜನಾಕ್ರೋಶ ಭುಗಿಲೆದ್ದಿತ್ತು.

ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಡಾ. ಕುಮಾರ್,ಸಿಇಒ ಶೇಕ್ ತನ್ವೀರ್ ಆಸಿಫ್,ಡಿ.ಹೆಚ್.ಓ ಡಾ:ಮೋಹನ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಗ್ರಾಮಸ್ಥರ ಆರೋಗ್ಯ ವಿಚಾರಿಸಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ:ಕುಮಾರ್, ಮಾರೆನಹಳ್ಳಿ ಗ್ರಾಮದಲ್ಲಿ ಕಳೆದ ಆರು ಏಳು ದಿನಗಳ ಹಿಂದೆ ಗ್ರಾಮದ 17 ಜನರಲ್ಲಿ ತೀವ್ರ ವಾಂತಿಭೇದಿ ಕಾಣಿಸಿಕೊಂಡು ಅನಾರೋಗ್ಯಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದ್ದಂತೆ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆ ಪ್ರತಿನಿತ್ಯ ಗುಣಮಟ್ಟದ ಚಿಕಿತ್ಸೆಯ ಮೂಲಕ ರೋಗಿಗಳ ಸಂಪರ್ಕದಲ್ಲಿದ್ದು ಅದರಲ್ಲಿ 13 ಜನ ಗುಣಮುಖರಾಗಿದ್ದಾರೆ.ಉಳಿದ ನಾಲ್ಕು ಮಂದಿ ಮಾತ್ರ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರಿಗೂ ಸೂಕ್ತ ಚಿಕಿತ್ಸೆ ಕೊಡಿಸಲು ಜಿಲ್ಲಾಡಳಿತದಿಂದ ಸೂಚಿಸಿದ್ದೇವೆ.

ಗ್ರಾಮ ಪಂಚಾಯಿತಿಯಿಂದ ಮಾರೇನಹಳ್ಳಿ ಗ್ರಾಮಕ್ಕೆ ಬರುವ ನೀರನ್ನು ಎರಡು ಬಾರಿ ಪರಿಶೀಲನೆಗೆ ಒಳಪಡಿಸಿದ ಸಂದರ್ಭದಲ್ಲಿ ಕುಡಿಯುವುದಕ್ಕೆ ಯೋಗ್ಯವಾದ ಶುದ್ಧ ನೀರು ಎಂದು ವರದಿ ಬಂದಿದೆ.ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕೆಲವು ಮನೆಗಳಲ್ಲಿ ಖಾಸಗಿ ಕೊಳವೆ ಬಾವಿಗಳಿದ್ದು ಆ ನೀರುಗಳನ್ನು ಪರಿಶೀಲನೆಗೆ ಕಳಿಸಿಕೊಡಲಾಗಿದೆ. ಹಾಗೂ ಮಾರೇನಹಳ್ಳಿ ಜವರಮ್ಮ ಮತ್ತು ಕುಂದೂರು ಕಾಳಮ್ಮ ವಯೋ ಸಹಜನದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಈ ಘಟನೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ.ಮಾರೇನಹಳ್ಳಿ ಗ್ರಾಮದ ಜನರು ಯಾವುದೇ ಭಯಪಡುವ ಅಗತ್ಯವಿಲ್ಲ ನಿರಂತರ ನಿಮ್ಮ ಸೇವೆ ಮಾಡಲು ಜಿಲ್ಲೆ ಮತ್ತು ತಾಲೂಕು ಆಡಳಿತ ಬದ್ಧರಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಅಶ್ವಾಶನೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಆದರ್ಶ,ತಾಲೂಕು ಆರೋಗ್ಯ ಅಧಿಕಾರಿ ಅಜಿತ್,ಜಿಲ್ಲಾ ಪರಿವೀಕ್ಷಕ ಅಧಿಕಾರಿ ಡಾ: ಕುಮಾರ್,ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಕಾರ್ಯಪಾಲಕ ಪ್ರಮೋದ್,ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಶ್ಮಿ,ಸಹಾಯಕ ಇಂಜಿನಿಯರ್ ಪ್ರವೀಣ್, ಪಿಡಿಓ ದಿನೇಶ್, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಇದ್ದರು.

————- ಮನು ಮಾಕವಳ್ಳಿ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?