ಮೂಡಿಗೆರೆ:ಕಿರುಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ಶಿಕ್ಷಕಿಯರು ದಿನನಿತ್ಯ
ವಿಧ್ಯಾರ್ಥಿಗಳ ಎದುರೇ ಪರಸ್ಪರ ಜಗಳ ಮಾಡಿಕೊಳ್ಳುತ್ತಿದ್ದು ಇದರಿಂದ ವಿಧ್ಯಾರ್ಥಿಗಳ ಕಲಿಕೆಗೆ ಕುತ್ತು ಬಂದಿರುವ ಕಾರಣ
ಇದನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆ ಉಪ ನಿರ್ಧೇಶಕ ಪುಟ್ಟರಾಜು ಅವರು ಮೂಡಿಗೆರೆ ಬಿಇಒ ಹೇಮಂತ್ ಚಂದ್ರ ಅವರಿಗೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದಾರೆ.
ಶಾಲೆಯಲ್ಲಿ ಓರ್ವ ಶಿಕ್ಷಕಿ 1994 ರಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದು, ಮತ್ತೊಬ್ಬರು ಕಳೆದ ವರ್ಷ, ಮುಖ್ಯ ಶಿಕ್ಷಕಿ
ಕಮಲಮ್ಮ ಅವರು ಕಳೆದ 6 ತಿಂಗಳ ಹಿಂದೆ ವರ್ಗಾವಣೆಗೊoಡು ಬಂದಿದ್ದಾರೆ.ಈ ಮೂವರು ಶಿಕ್ಷಕಿಯರು
ಪ್ರತಿನಿತ್ಯ ತರಗತಿಯಲ್ಲಿ ಒಬ್ಬರಿಗೊಬ್ಬರು ವಿಧ್ಯಾರ್ಥಿಗಳ ಎದುರೇ ಪರಸ್ಪರ ಸಣ್ಣಪುಟ್ಟ ವಿಚಾರಕ್ಕೆ ಜಗಳ
ಮಾಡಿಕೊಳ್ಳುತ್ತಿದ್ದಾರೆ.
ಶಾಲೆಯಲ್ಲಿ ಪಾಠಗಳು ನಡೆಯದೆ 3 ತಿಂಗಳು ಕಳೆದಿದೆ ಎನ್ನಲಾಗಿದೆ.ಅಧ್ಯಯನ ವರ್ಷದ
ಪ್ರಾರಂಭದಲ್ಲಿ ವಿಧ್ಯಾರ್ಥಿಗಳನ್ನು ಶಾಲೆಗೆ ಸೇರಿಸಲು ಬಂದ ಪೋಷಕರು ಶಿಕ್ಷಕಿಯರ ಜಗಳ ನೋಡಿ ತಮ್ಮ
ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ್ದಾರೆ.ಇದರಿಂದಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದಿದೆ.
ಈ 3 ಶಿಕ್ಷಕಿಯರ ಹೊರತಾಗಿ ಓರ್ವ ಅತಿಥಿ ಶಿಕ್ಷಕಿ ಕೂಡಾ ಶಾಲೆಯಲ್ಲಿದ್ದು ಅವರಿಗೆ ಪಾಠ ಮಾಡಲು ಕಷ್ಟವಾಗಿದೆ.ಕಳೆದ ವರ್ಷದ ಆರಂಭದಲ್ಲಿ ಮುಖ್ಯ ಶಿಕ್ಷಕಿ ಬಿಸಿಯೂಟದ ಹಾಲಿನ ಪುಡಿ, ಆಹಾರ ಧಾನ್ಯ, ಷೂ ಮತ್ತಿತರ
ವಿಧ್ಯಾರ್ಥಿಗಳಿಗೆ ನೀಡಬೇಕಾದ ವಸ್ತುಗಳನ್ನು ಬೇರೆ ಕೊಠಡಿಯಲ್ಲಿ ಶೇಖರಿಸಿಟ್ಟಿದ್ದರು.ಇದನ್ನು ಮಕ್ಕಳ
ಪೋಷಕರು ಪತ್ತೆ ಹಚ್ಚಿ ಶಿಕ್ಷಣಾಧಿಕಾರಿಗೆ ದೂರು ನೀಡಿ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದಾಗ ಕ್ಷೇತ್ರಶಿಕ್ಷಣಾಧಿಕಾರಿಗಳು ಶಾಲೆಗೆ ಬೇಟಿ ನೀಡಿ ಮುಖ್ಯ ಶಿಕ್ಷಕಿಯನ್ನು ಬೇರೆ ಶಾಲೆಗೆ ನಿಯೋಜನೆ ಮೇಲೆ ಕಳಸಿದ್ದರು. ಜೂನ್ ಆರಂಭದಲ್ಲಿ ನಿಯೋಜನೆ ಅವಧಿ ಕೊನೆಗೊಂಡಿದ್ದರಿoದ ಮತ್ತೆ ಅವರು ಅದೇ ಶಾಲೆಗೆ
ಬಂದಿದ್ದಾರೆ.
ಈ ಬಗ್ಗೆ ಸ್ಥಳೀಯರ ದೂರಿನಂತೆ ಮೂವರು ಶಿಕ್ಷಕಿಯರನ್ನು ವರ್ಗಾವಣೆಗೊಳಿಸಿ ಬೇರೆ ಶಿಕ್ಷಕಿಯರನ್ನು
ನೇಮಿಸುವಂತೆ ಕಿರುಗುಂದ ಗ್ರಾ.ಪಂ.ನ ಸಾಮಾನ್ಯಸಭೆಯಲ್ಲಿ ನಿರ್ಣಯ ಕೈಗೊಂಡು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.ಅಲ್ಲದೆ ಶನಿವಾರ ಸ್ಥಳೀಯರು ಸಭೆ ಸೇರಿ ಪ್ರತಿಭಟನೆಗೂ ಸಿದ್ದತೆ ನಡೆಸಿದ್ದರು.
ಪರಿಸ್ತಿತಿ ಕೈಮೀರುವ ಹಂತಕ್ಕೆ ತಲುಪಿರುವುದರಿಂದ ಶಿಕ್ಷಣ ಇಲಾಖೆಯ ಉಪ ನಿರ್ಧೇಶಕ ಪುಟ್ಟರಾಜ್ ಅವರು ತನಿಖೆ ನಡೆಸಿ ವರದಿ ನೀಡುವಂತೆ ಬಿ ಇ ಒ ಹೇಮಂತ ಚಂದ್ರ ಅವರಿಗೆ ಸೂಚಿಸಿದ್ದರು.
ಅದರಂತೆ ಬಿ ಇ ಒ ಬುಧವಾರ ಶಾಲೆಗೆ ಬೇಟಿ ನೀಡಿದ ವೇಳೆ ಸ್ಥಳೀಯರು ಶಾಲೆ ಆವರಣದಲ್ಲಿ ಜಮಾಯಿಸಿ ಮೂವರು ಶಿಕ್ಷಕಿಯರನ್ನು ಬೇರೆಡೆಗೆ ವರ್ಗಾವಣೆಗೊಳಿಸಿ ಇಲ್ಲಿಗೆ ಬೇರೆ ಶಿಕ್ಷಕರನ್ನು ನಿಯೋಜಿಸುವಂತೆ ಪಟ್ಟು ಹಿಡಿದರು.
ಸ್ಥಳೀಯರೊಂದಿಗೆ ಬಿ ಇ ಒ ಅವರು ಮಾತನಾಡಿ ಈ ವಿವರವನ್ನು ಯಥಾವತ್ ಆಗಿ ಉಪ ನಿರ್ಧೇಶಕರಿಗೆ ವರದಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಗ್ರಾ.ಪಂ.ಸದಸ್ಯ ದಿನೇಶ್,ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಎಂ.ಆರ್.ನಜೀರ್, ಯು.ಹೆಚ್. ರಾಜಶೇಖರ್,ಹಿರಿಯ ಕೃಷಿಕ ಯು.ಎನ್.ಚಂದ್ರೇಗೌಡ,ಎಸ್ ಡಿ ಎಂ ಸಿ ಸದಸ್ಯ ಅಬ್ಬಾಸ್,ಮಧು, ಕೆ.ಕೆ.ರಾಮಯ್ಯ, ಕೆ.ಬಿ.ಹರೀಶ್, ಕೆ,ಆರ್.ಲೋಕೇಶ್, ಶಿಕ್ಷಣ ಇಲಾಖೆಯ ಸಿ.ಆರ್.ಪುರಿಷೋತ್ತಮ್ ಇದ್ದರು.
————-ವರದಿ: ವಿಜಯಕುಮಾರ್.ಮೂಡಿಗೆರೆ