ಮೂಡಿಗೆರೆ:ಶಾಸಕಿಯಾಗಿ ಚುನಾಯಿತರಾಗಿ ಬಹಳ ಸಮಯ ಕಳೆದರು ಶಾಸಕಿ ನಯನ ಮೋಟಮ್ಮನವರು ಕಚೇರಿಯನ್ನು ತೆರೆಯದೆ ಮತ ಹಾಕಿದವರ ಕೈಗೂ ಸಿಗದೇ ಮಾಯವಾಗಿದ್ದರೆಂದು ಎಸ್‌ಡಿಪಿಐ ಕ್ಷೇತ್ರ ಸಮಿತಿ ಅಧ್ಯಕ್ಷ ಅಂಗಡಿ ಚಂದ್ರು ಆರೋಪಿಸಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಮೂಡಿಗೆರೆ ಎಂ ಜಿ ಎo ಆಸ್ಪತ್ರೆಯಲ್ಲಿ ಸರ್ಜನ್ ಇಲ್ಲ.ರಕ್ತ ಪರೀಕ್ಷೆ, ಔಷಧ,ಸ್ಕ್ಯಾನಿಂಗ್ ಮುಂತಾದ ಸಣ್ಣಪುಟ್ಟ ಪರೀಕ್ಷೆಗೂ ಹೊರಗಡೆ ಚೀಟಿ ಬರೆದು ಕೊಡುತ್ತಿದ್ದಾರೆ.ಆಲ್ದೂರು ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯo ವೈದ್ಯರಿಲ್ಲ.ಕಾರ್ಮಿಕರಿಗೆ ಅಪಘಾತ ಸಂಭವಿಸಿದಾಗ ಕನಿಷ್ಠ ಪ್ರಾಥಮಿಕ ಚಿಕಿತ್ಸೆ ದೊರೆಯದಂತಾಗಿದೆ. ಆಲ್ದೂರು ಪ್ರಾಥಮಿಕ ಕೇಂದ್ರವನ್ನು ಸಮುದಾಯ ಅರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಬೇಕು.ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಇದೂವರೆಗೂ ಗೆದ್ದು ಬಂದoತಹ ಯಾವುದೇ ಶಾಸಕರಿಂದಲೂ ಕ್ಷೇತ್ರದ ಅಭಿವೃದ್ಧಿ ಕಾರ್ಯ ನಡೆದಿಲ್ಲ.
ಶಾಸಕಿ ನಯನ ಮೋಟಮ್ಮ ಅವರು ಪಟ್ಟಣದಲ್ಲಿ ಕಛೇರಿ ತೆರಯದೇ ಅವರನ್ನು ಬೇಟಿ ಮಾಡಲು ಜನಗಳಿಗೆ ಕಷ್ಟವಾಗುತ್ತಿದೆ.ಹಾಗಾಗಿ ಶಾಸಕರು ತಮ್ಮ ಕಚೇರಿಯನ್ನು ಪಟ್ಟಣದಲ್ಲಿಯೇ ತೆರೆಯಬೇಕು.ಶಾಸಕರ
ಕಛೇರಿ ನಿರ್ವಹಣೆಗೆ ಸರ್ಕಾರ ತಿಂಗಳಿಗೆ 60 ಸಾವಿರ, ಮತ್ತು ಕ್ಷೇತ್ರ ಸಂಚಾರಕ್ಕೆ 60 ಸಾವಿರ ರೂ ಭತ್ಯೆ ನೀಡುತ್ತದೆ.ಹಾಗಿದ್ದೂ ಶಾಸಕರು ಕ್ಷೇತ್ರದಲ್ಲಿ ಕಾಣಸಿಗುತ್ತಿಲ್ಲ.ಮೂಡಿಗೆರೆ ಪಟ್ಟಣದಲ್ಲಿ ಗುಂಡಿ ಬಿದ್ದ ರಸ್ತೆ ಸರಿಪಡಿಸಬೇಕು.ಚೆನ್ನಾಗಿರುವ ರಸ್ತೆಯನ್ನು ಒಡೆದು ಪುನರ್ ನಿರ್ಮಾಣ ಮಾಡಿ ಹಣ ದೋಚುವುದನ್ನು ನಿಲ್ಲಿಸಬೇಕು.ಹಳ್ಳಿಗಳಲ್ಲಿರುವ ರಸ್ತೆಗಳ ಪರಿಸ್ಥಿತಿಯಂತೂ ಹೇಳತೀರದಾಗಿದೆ ಎಂದರು.
ಈ ಎಲ್ಲಾ ಸಮಸ್ಯೆಗಳ ಬಗ್ಗೆ ಶಾಸಕರು ಗಮನ ಹರಿಸದೆ ಹೋದಲ್ಲಿ ತಾಲೂಕಿನ ಜನರ ಪರವಾಗಿ ಮುಂದಿನ ದಿನದಲ್ಲಿ ಪಕ್ಷದಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ದೇಶಕ್ಕೆ ಸ್ವಾತಂತ್ರ ದೊರಕಿ 78ವರ್ಷಗಳಾದರೂ ಪ್ರಜೆಗಳಿಗೆ ಉಸಿರುಗಟ್ಟುವ ವಾತಾವರಣ ತಪ್ಪಿಲ್ಲ.ಈ ದೇಶವನ್ನಾಳಿದ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರ ಜನರಿಗೆ ನ್ಯಾಯ,ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿರುವುದಲ್ಲದೆ ಯಾವುದೇ ಅಭಿವೃದ್ದಿ ಕಾರ್ಯಕೈಗೊಳ್ಳಲು ಮುಂದಾಗಿಲ್ಲ.
ಕೇಂದ್ರ ಸರ್ಕಾರ ಜನರನ್ನು ಭಯದ ವಾತಾವರಣಕ್ಕೆ ತಳ್ಳಿದರೆ,ರಾಜ್ಯ ಸರ್ಕಾರ ದಲಿತರ ಹಣದಲ್ಲಿ ರಾಜ್ಯಭಾರ ಮಾಡುತ್ತಿದೆ. 2013ರಲ್ಲಿ ಎಸಿಪಿ ಮತ್ತು ಟಿಎಸ್ಪಿ ಕಾಯ್ದೆ ಜಾರಿಗೊಳಿಸಿದ ನಂತರ 2015ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದಿದ್ದು ಈಗಿನ ಕಾಂಗ್ರೆಸ್ ಸರ್ಕಾರ ದಲಿತರಿಗೆ ಮೀಸಲಿಟ್ಟ 25 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆಂದು ದೋಚಿದ್ದಾರೆ. ದಲಿತರು,ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರನ್ನು ಆರ್ಥಿಕವಾಗಿ ಮುಂದೆ ತರಬೇಕಾದ ಸರ್ಕಾರ ಅಹಿಂದಾ ಹೆಸರಿಲ್ಲಿ ಶೋಷಣೆ ಮಾಡುತ್ತಿರುವುದನ್ನು ಎಸ್‌ಡಿಪಿಐ ಪಕ್ಷ ತೀವ್ರವಾಗಿ ಖಂಡಿಸುತ್ತದೆ.ದಲಿತರಿರುವ ಕ್ಷೇತ್ರಗಳಿಗೆ ಎಸ್‌ಇಪಿ, ಟಿಎಸ್‌ಪಿ ಹಣ ಇದೂವರೆಗೂ ಬಿಡುಗಡೆ ಮಾಡಿಲ್ಲ.ಇನ್ನು ದಲಿತರ ಅಭಿವೃದ್ಧಿ ಹೇಗೆ ಸಾಧ್ಯವೆಂದು ಪ್ರಶ್ನಿಸಿದ ಅವರು,ದಲಿತರಿಗೆ ಮೀಸಲಿಟ್ಟ ಹಣ ಬೇರೆ ಯೋಜನೆಗಳಿಗೆ ಬಳಕೆ ಮಾಡದಂತೆ ಕಾಯ್ದೆಗೆ ಪುನಹ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದ ಅವರು,ಜನರು ಕಾಂಗ್ರೆಸ್ ಮತ್ತು ಬಿಜೆಪಿ ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸದೇ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದೆ. ಮುಂದಿನ ದಿನದಲ್ಲಿ ಈ ಎರಡೂ ಪಕ್ಷ ದೂಳಿಪಟವಾಗಲಿದ್ದು, ಸಮಾನತೆಯ ಪ್ರತೀಕವಾಗಿರುವ ಎಸ್‌ಡಿಪಿಐ ಪಕ್ಷದ ಮೇಲೆ ಜನರು ಒಲವು ತೋರುತ್ತಿದ್ದಾರೆಂದು ತಿಳಿಸಿದರು.
ಕಾರ್ಯದರ್ಶಿ ರಿಜ್ವಾನ್ ಮಾತನಾಡಿ, ಸುಮಾರು 15 ವರ್ಷದಿಂದ ನಮ್ಮ ಪಕ್ಷ ಜನಪರ ಹೋರಾಟಗಳನ್ನು ಮಾಡುತ್ತ ಬಂದಿದ್ದು, 16ನೇ ವರ್ಷಕ್ಕೆ ಕಾಲಿಟ್ಟಿದೆ.ಇತ್ತೀಚೆಗೆ ಪಕ್ಷದ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, 2ನೇ ಬಾರಿಗೆ ಅಂಗಡಿ ಚಂದ್ರು ನೂತನ ಅಧ್ಯಕ್ಷರಾಗಿ ಪುನರ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಎಂ.ಯು.ಶರೀಫ್, ಸಹಕಾರ್ಯದರ್ಶಿಯಾಗಿ ಸಂತೋಷ್, ಕೋಶಾಧಿಕಾರಿಯಾಗಿ ಕೆ.ಪಿ.ಖಾಲಿದ್, ನಾಗೇಶ್ ಸಾಲುಮರ ಆಯ್ಕೆಯಾಗಿದ್ದಾರೆಂದು ತಿಳಿಸಿದರು.
ಉಪಾಧ್ಯಕ್ಷ ಎಂ.ಯು.ಶರೀಫ್, ಸಹ ಕಾರ್ಯದರ್ಶಿ ಸಂತೋಷ್, ಕೋಶಾಧಿಕಾರಿ ಖಾಲಿದ್, ನಾಗೇಶ್ ಸಾಲುಮರ ಉಪಸ್ಥಿತರಿದ್ದರು.
——-ವಿಜಯ್ ಕುಮಾರ್