ಮೂಡಿಗೆರೆ:ಪ್ಲಾಂಟೇಷನ್ ಭೂಮಿಯನ್ನು ಗುತ್ತಿಗೆ ನೀಡುತ್ತಿರುವ ರಾಜ್ಯ ಸರಕಾರದ ನಿಲುವನ್ನು ಭೂ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎoದು ಸಮಿತಿ ಅಧ್ಯಕ್ಷ ಬಿ.ರುದ್ರಯ್ಯ ಹೇಳಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ನಿವೇಶನ ರಹಿತರಾಗಿದ್ದಾರೆಂದು ಸಕಾರದ ಪಂಚಾಯತ್ ರಾಜ್ ಇಲಾಖೆ ಖುದ್ದು ಪಟ್ಟಿ ಮಾಡಿದೆ.ಈಗಾಗಲೇ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನಿವೇಶನ ಹಂಚಿಕೆಗೆ ಭೂಮಿ ಇಲ್ಲದಿರುವ ಜ್ವಲಂತ ಸಮಸ್ಯೆ ಸರಕಾರದ ಕಣ್ಣ ಮುಂದಿದೆ. ಹೀಗಿರುವಾಗ ನೂರಾರು ಎಕರೆಗೂ ಅಧಿಕ ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಶ್ರೀಮಂತ ಒತ್ತುವರಿದಾರರ ಪರವಾಗಿ ಸರ್ಕಾರ ನಿಲ್ಲುತ್ತಿರುವುದು ಸರಿಯಲ್ಲ.ಇದು ಎಲ್ಲಾ ವರ್ಗದ ಬಡ, ರೈತ, ಕೂಲಿ ಕಾರ್ಮಿಕರು ಮತ್ತು ನಿವೇಶನ ರಹಿತರ ಬಗ್ಗೆ ಸರಕಾರಕ್ಕಿರುವ ತಾತ್ಸಾರ ಮನೋಭಾವ ತೋರಿಸುತ್ತದೆ ಎಂದು ದೂರಿದರು.
ಅರಣ್ಯ ಒತ್ತುವರಿ ತೆರವಿಗೆ ಸರ್ಕಾರ ಆದೇಶ ಮಾಡಿದ ಬಳಿಕ ದೊಡ್ಡ ದೊಡ್ಡ ಭೂ ಒತ್ತುವರಿದಾರರು ಹೋರಾಟಕ್ಕಿಳಿದಿರುವುದು ನಾಚಿಗೇಡಿನ ಸಂಗತಿ.ಅಲ್ಲದೇ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಕಠಾರಿಯಂತಹ ಧಕ್ಷ ಅಧಿಕಾರಿಯ ವರ್ಗಾವಣೆಗೆ ಒತ್ತಾಯಿಸುತ್ತಿರುವುದು ಖಂಡನೀಯ.ಅರಣ್ಯ ನಾಶದಿಂದ ವಯನಾಡು ಭೂ ಕುಸಿತ ಕಣ್ಣಮುಂದಿದೆ.ಪ್ರಕೃತಿ ಸಮತೋಲನ ಕಳೆದುಕೊಳ್ಳುತ್ತಿದೆ.ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು.ಗುತ್ತಿಗೆ ಆಧಾರದಲ್ಲಿ ಭೂಮಿ ನೀಡುವ ಪ್ರಕ್ರಿಯೆ ಕೈಬಿಡಬೇಕೆಂದು ಒತ್ತಾಯಿಸಿದರು.
ಉಪಾಧ್ಯಕ್ಷ ರಮೇಶ್ ಕೆಳಗೂರು ಮಾತನಾಡಿ,ಜಿಲ್ಲೆಯಲ್ಲಿ ೧೦೬೨೪೯ ಎಕರೆ ಕಂದಾಯ,೩೫೯೪೬ ಎಕರೆ ಅರಣ್ಯ ಹಾಗೂ ೧೫೧೨೪೯ ಎಕರೆ ಗೋಮಾಳ ಇತರೆ ಸರಕಾರಿ ಭೂಮಿ ಒತ್ತುವರಿಯಾಗಿದೆ.ಈ ಎಲ್ಲಾ ಸರಕಾರಿ ಭೂ ಒತ್ತುವರಿ ತೆರವುಗೊಳಿಸಿ ಅಂಗನವಾಡಿ, ಶಾಲೆ, ಆಸ್ಪತ್ರೆ, ಸಮುದಾಯ ಭವನ, ಕ್ರೀಡಾ ಮೈದಾನ ಮತ್ತು ಇನ್ನಿತರ ಸರ್ಕಾರಿ ಕಟ್ಟಡ ನಿರ್ಮಿಸಲು ಅಗತ್ಯ ಕ್ರಮ ಕೈಗೊಂಡು,ಉಳಿದ ಜಮೀನನ್ನು ಎಲ್ಲಾ ಜಾತಿಯ ಭೂರಹಿತ ಬಡ ಕುಟುಂಬಗಳಿಗೆ ತಲಾ ಒಂದು ಎಕರೆ ಮಂಜೂರು ಮಾಡಬೇಕೆಂದು ಒತ್ತಾಯಿಸಿದ ಅವರು, ಕಸ್ತೂರಿರಂಗನ್, ಗಾಡ್ಗಿಲ್ ವರದಿಯನ್ನು ಕನ್ನಡದಲ್ಲಿ ಮುದ್ರಿಸಿ ಎಲ್ಲಾ ಗ್ರಾ.ಪಂ. ಮೂಲಕ ಜನರಿಗೆ ತಲುಪಿಸುವ ಕೆಲಸ ಸರಕಾರ ಮಾಡಬೇಕೆಂದು
ಆಗ್ರಹಿಸಿದರು.
ಕಾರ್ಯದರ್ಶಿ ಶಿವಪ್ರಸಾಧ್, ಹರೀಶ್ ನಲ್ಕೆ, ನಾಗೇಶ್ ಸಾಲುಮರ ಉಪಸ್ಥಿತರಿದ್ದರು.
ವರದಿ: ವಿಜಯಕುಮಾರ್.ಟಿ.ಯಕುಮಾರ್.