ಹಾಸನ:ಮೊಬೈಲ್ ಓದು,ಮೊಬೈಲ್ ಸಂಸ್ಕೃತಿ ಎಷ್ಟೇ ಮುಂದುವರೆದಿದ್ದರೂ ಪುಸ್ತಕ ಓದು ಹಾಗೂ ಪುಸ್ತಕ ಸಂಸ್ಕೃತಿಗೆ ತನ್ನದೇ ಆದ ವಿಶೇಷ ಮಹತ್ವವಿದೆ ಹಾಗೂ ಅರ್ಥವಿದೆ
ಎಂದು ಅಕ್ಷರ ಅಕಾಡೆಮಿಯ ಸಂಸ್ಥಾಪಕ ಹಾಗೂ ಟೈಮ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಬಿ.ಕೆ ಟೈಮ್ಸ್ ಗಂಗಾಧರ್,ಹೇಳಿದರು.
ನಗರದ ಗಂಧದ ಕೋಠಿಯ ಉದ್ಯಾನವನದ ಆವರಣದಲ್ಲಿ ಭಾನುವಾರ ಅಕ್ಷರ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ‘ಬುಕ್ ಮಾತು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ಬಟನ್ ನಲ್ಲಿ ಸಾವಿರಾರು ಬಲ್ಬುಗಳನ್ನು ಏಕಕಾಲದಲ್ಲಿ ಹೊತ್ತಿಸುವಷ್ಟು
ತಂತ್ರಜ್ಞಾನ ಮುಂದುವರೆದಿದ್ದರೂ ಒಂದು ಬಲ್ಬಿನಿಂದ ಮತ್ತೊoದು ಬಲ್ಬನ್ನು ಬೆಳಗಲು ಸಾಧ್ಯವಿಲ್ಲ. ಆದರೆ ಒಂದು ದೀಪದಿoದ ಇನ್ನೊಂದು ದೀಪವನ್ನು ಅದರಿಂದ ಸಾವಿರಾರು
ದೀಪಗಳನ್ನು ಬೆಳಗಲು ಸಾಧ್ಯ. ಅದೇ ದೀಪದ ವಿಶೇಷ ಗುಣ.ಹಾಗೆಯೇ ತಾಂತ್ರಿಕವಾಗಿ ನಾವು ಎಷ್ಟೇ ಮುಂದುವರೆದಿದ್ದರು,ಪುಸ್ತಕ ಓದಿನಿಂದ ಆಗುವ ಅನುಕೂಲ ಸಾಕಷ್ಟಿದೆ. ಹಾಗೆಯೇ
ಮಕ್ಕಳಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವಲ್ಲಿ ಶಿಕ್ಷಕರದ್ದಷ್ಟೇ ಪೋಷಕರದ್ದೂ ದೊಡ್ಡ ಪಾತ್ರವಿದೆ. ಶಿಕ್ಷಕ ಹಾಗೂ ಪೋಷಕರ ಸಮಾನ ಪ್ರಯತ್ನದಿಂದ ವಿದ್ಯಾರ್ಥಿಗಳಲ್ಲಿ
ಪುಸ್ತಕ ಪ್ರೀತಿಯನ್ನು ಬೆಳೆಸಬಹುದು ಎಂದು ಹೇಳಿದರು.
ಲೇಖಕಿ ಭಾಗ್ಯ ಮಂಜುನಾಥ್ ಬರೆದಿರುವ ಹಾಡಿನ ಸುಗ್ಗಿ ಪುಸ್ತಕವನ್ನು ಬಿಡುಗಡೆ ಮಾಡಿದ ಸಾಹಿತಿ ಶೈಲಜಾ ಹಾಸನ ಮಾತನಾಡಿ, ಚಿಕ್ಕಂದಿನಲ್ಲಿ ಕಲಿತ ಶಿಶುಗೀತೆಗಳು ಇಂದಿಗೂ ಅಚ್ಚಳಿಯದೆ ಹೃದಯದಲ್ಲಿ ನಿಂತಿವೆ. ಆ ಪದ್ಯಗಳೇ ನಮ್ಮನ್ನು ಸಾಹಿತಿಯಾಗಿಸಿದ್ದು,ಪೋಷಕರು
ಮಕ್ಕಳ ಪಠ್ಯಪುಸ್ತಕದ ಹೊರತಾಗಿ ಇತರ ಓದಿಗೆ ಹೆಚ್ಚು ಅವಕಾಶವನ್ನು, ಪ್ರೋತ್ಸಾಹವನ್ನು ನೀಡಿದಲ್ಲಿ ಮಕ್ಕಳು ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಸಾಹಿತ್ಯದ
ಓದು ಮಕ್ಕಳಲ್ಲಿ ಸಂಸ್ಕಾರವನ್ನು ತರುತ್ತದೆ, ಹಾಗೂ ಶಾಂತ ಮನೋಭಾವನೆಯನ್ನು ಬೆಳೆಸುತ್ತದೆ. ಭಾಗ್ಯ ಅವರ ಹಾಡಿನ ಸುಗ್ಗಿ ಪುಸ್ತಕದ ಒಂದೊoದು ಪದ್ಯವು ಮಕ್ಕಳ ಮನಸ್ಸಿಗೆ
ಮುದ ನೀಡುತ್ತವೆ.ಕವನದೊಳಗೆಯೇ ಕತೆ, ಕೋರಿಕೆ ಕಾಳಜಿ,ಕಾತರ ಅಡಗಿವೆ. ಈ ಪುಸ್ತಕ ಪುಟ್ಟ ಮಕ್ಕಳ ಹುಟ್ಟುಹಬ್ಬಕೆ ನೀಡಬಹುದಾದ ಅತ್ಯಮೂಲ್ಯ ಉಡುಗೊರೆ ಎಂದೇ ಹೇಳುವೆ.
ನಾಡಿನಾದ್ಯಂತ ಹಾಡಿನ ಸುಗ್ಗಿ ತಲುಪಲಿ ಎಂದರು.
ಸಾಹಿತಿ ಸುಮಾ ರಮೇಶ್ ರವರ ಹಚ್ಚೆ ದಿನ್ ಪುಸ್ತಕ ಕುರಿತು ಲೇಖಕಿ ಸುಮಾ ವೀಣಾ ಮಾತನಾಡಿ, ಹಾಸ್ಯ ಮಾಡುವುದು ಸುಲಭ ಆದರೆ ಅದನ್ನು ಬರಹದಲ್ಲಿ ಬಂಧಿಸುವುದು ಕಷ್ಟ. ಅದಕ್ಕೆ ಅಂತದೃಷ್ಟಿ ಬೇಕಾಗುತ್ತದೆ. ಎಲ್ಲಿಯೂ ಅಪಾರ್ಥ, ದ್ವಂದ್ವ ಅರ್ಥ ಬಾರದಂತೆ
ಆರೋಗ್ಯಕರ ಹಾಸ್ಯ ಬರೆಯುವುದು ಸುಲಭದ ಮಾತಲ್ಲ. ಹಾಸ್ಯ ಲೇಖಕಿ ಅಂದ ಕೂಡಲೇ ಜ್ಯೋತ್ಸ್ನಾ ಕಾಮತ್, ನುಗ್ಗೆಹಳ್ಳಿ ಪಂಕಜ,ಭುವನೇಶ್ವರಿ ಹೆಗಡೆ ಟಿ.ಸುನಂದ ಅಮ್ಮನವರ ಹೆಸರು ತಕ್ಷಣ ನೆನಪಾಗುತ್ತದೆ. ಸುಮಾ ರಮೇಶ್ ಕೂಡ ಅದೇ ಸಾಲಿಗೆ ಸೇರುತಿದ್ದಾರೆ. ಮುಂದಿನ ದಿನಗಳಲ್ಲಿ ನಾಡಿನಾದ್ಯಂತ ಅವರ ಲೇಖನಿಯ ಪರಿಮಳ ಹರಡಲಿ ಎಂದು ಹಾರೈಸಿದರು. ನಾವು ದಿನನಿತ್ಯ ಎದುರಿಸುವ ಕೆಲವು ಪ್ರಸಂಗಗಳಿರಬಹುದು ಅಥವಾ ನಾವು
ಬಳಸುವಂತಹ ವಸ್ತುಗಳು ಇರಬಹುದು ನಮ್ಮ ಒಡನಾಟದಲ್ಲಿರುವ ಜನರನ್ನೇ ಇರಬಹುದು. ಅವರನ್ನು ಸೂಕ್ಷ್ಮವಾಗಿ ನೋಡುವುದರಿಂದ ಅಥವಾ ಆ ಪ್ರಸಂಗಗಳನ್ನು ಸೂಕ್ಷ್ಮವಾಗಿ ಅನುಭವಿಸುವುದರಿಂದ, ಆಸ್ವಾದಿಸುವುದರಿಂದ ಇಂತಹ ಹಾಸ್ಯಗಳು ಹುಟ್ಟಿಕೊಳ್ಳುತ್ತವೆ. ಸುಮಾ ಅವರಿಗೆ ಅಂತಹ ಅಂತದೃಷ್ಟಿ ಹಾಗೂ ಪ್ರತಿ ಪ್ರಸಂಗವನ್ನು ಅನುಭವಿಸುವ ಅದನ್ನು ಸ್ವಾರಸ್ಯಕರವಾಗಿ ಬರೆಯುವ ಕಲೆ ಒಲಿದಿದೆ. ಈಗಾಗಲೇ ಅವರ ಪುಸ್ತಕಕ್ಕೆ ನುಗ್ಗೇಹಳ್ಳಿ ಪಂಕಜ ದತ್ತಿ ಪ್ರಶಸ್ತಿ ದೊರೆತಿರಿವುದು ಪ್ರಶಂಸನೀಯ ಎಂದರು.
ಲೇಖಕಿಯರಾದ ಸಮಾ ರಮೇಶ್, ಭಾಗ್ಯ ಮಂಜುನಾಥ್, ರೋಟರಿ ರಾಯಲ್ ಸಂಸ್ಥೆಯ ಅಧ್ಯಕ್ಷ ಸಚಿನ್ ಯು.ವಿ., ಮಮತ ಪ್ರಭೂ ಹಾಗೂ ಇತರರು ಹಾಜರಿದ್ದರು.