ಸಕಲೇಶಪುರ/ಅರೇಹಳ್ಳಿ:ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆಯಾ?ಈ ವರದಿಯನ್ನು ನೋಡಿದರೆ ಹೌದು ಎನ್ನಿಸುತ್ತೆ.
ಜೀತಮುಕ್ತರಿಗೆ ಮಂಜೂರು ಆಗಿರುವ ಜಮೀನನ್ನು ಅವರಿಗೆ ಬಿಟ್ಟುಕೊಡದೆ ಖಾಸಗಿ ವ್ಯಕ್ತಿಗಳು ಅಂದ ದರ್ಬಾರ್ ನಡೆಸುತ್ತಿರುವ ಘಟನೆ ಅರೇಹಳ್ಳಿ ಸಮೀಪದ ಸಕಲೇಶಪುರ ತಾಲೂಕು ವ್ಯಾಪ್ತಿಗೊಳಪಡುವ ಕೆಸಗುಲಿ ಗ್ರಾಮದಿಂದ ವರದಿಯಾಗಿದೆ.
ಗ್ರಾಮದ ಸರ್ವೆ ನಂ.197 ರಲ್ಲಿ ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿಯ ಗಂಗೂರು ಗ್ರಾಮದ 7 ಜೀತಮುಕ್ತ ದಲಿತರಿಗೆ ತಲಾ 3 ಎಕರೆಯಂತೆ 21 ಎಕರೆ ಜಮೀನನ್ನು 2013 ರಲ್ಲಿ ಮಂಜೂರು ಮಾಡಲಾಗಿತ್ತು. ಮಂಜೂರು ಮಾಡಲಾದ ಜಮೀನಿನ ಹೊಸ ಮಾಲೀಕರಿಗೆ ಮನೆ,ರಸ್ತೆಯಂತಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿತ್ತು.
ಈಗ ಅದೇ ಜಮೀನು ಬಲಾಡ್ಯರಿಂದ ಒತ್ತುವರಿಯಾಗಿದ್ದು ಅದನ್ನು ಬಿಡಿಸಿಕೊಡುವಂತೆ ಮಂಜೂರು ಪಡೆದವರು ಆಡಳಿತದ ಮೊರೆ ಹೋಗಿದ್ದರು.ಇವರ ಮನವೀಯ ಮೇರೆಗೆ ಜಮೀನನ್ನು ಅಳತೆ ಮಾಡಲು ಬಂದಿದ್ದ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗು ಸರ್ವೇಯರ್ಗಳನ್ನೇ ಅಕ್ರಮ ಹಿಡುವಳಿಕೋರರು ಬೆದರಿಸಿ ಓಡಿಸಿದ್ದಾರೆ.
ಈ ಸಮಸ್ಯೆಯ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಜೀತಮುಕ್ತ ಮಹಿಳೆ ಗೌರಮ್ಮ,ನಮಗೆ ಮಂಜೂರಾದ ಜಮೀನುಗಳಲ್ಲಿ ಬಹುತೇಕವನ್ನು ಗ್ರಾಮಸ್ಥರು ಒತ್ತುವರಿ ಮಾಡಿಕೊಂಡಿದ್ದಾರೆ.ಬಹಳ ದಿನಗಳಿಂದ ಅವರ ಮನೆಬಾಗಿಲಿಗೆ ಹೋಗಿ ನಮ್ಮ ಹಕ್ಕನ್ನು ನಮಗೆ ಹಿಂದಿರುಗಿಸುವಂತೆ ಮನವಿ ಮಾಡಿಕೊಂಡರು ಸಹ ಅವರು ಒಪ್ಪುತ್ತಿಲ್ಲ.
ಕೆಟ್ಟ ಶಬ್ದಗಳಿಂದ ಜಾತಿಯನ್ನು ಹಿಡಿದು ಬೈಯ್ಯುವುದು,ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡು ಹೊಡೆಯಲು ಬರುವುದು ಮಾಡುತ್ತಾರೆ.ಅನ್ಯಮಾರ್ಗವಿಲ್ಲದೆ ತಹಶೀಲ್ದಾರರ ಕಚೇರಿಗೆ ದೂರು ನೀಡಿದ್ದೆವು.ಅದರಂತೆ ಕಂದಾಯ ಅಧಿಕಾರಿಗಳು ಹಾಗು ಸರ್ವೇ ಇಲಾಖೆಯವರು ಜಾಗ ಗುರುತಿಸಲು ಬಂದಿದ್ದರು.ಅವರ ಕೆಲಸಕ್ಕೂ ಅಡ್ಡಿ ಪಡಿಸಿ ವಾಪಸ್ ಕಳುಹಿಸಿದ್ದಾರೆ.
ಇಲ್ಲಿ ನಮಗೆ ಜಮೀನು ಇದ್ದರು ಸಹ ಅದರಲ್ಲಿ ಬದುಕುವ ಹಕ್ಕನ್ನೇ ಕಸಿದುಕೊಳ್ಳಲಾಗಿದೆ.ಬ್ಯಾಂಕುಗಳಲ್ಲಿ ಸಾಲ ಮಾಡಿಕೊಂಡು ಇಲ್ಲಿ ಮನೆಕಟ್ಟಿಕೊಂಡಿದ್ದೇವೆ.ಅದರಲ್ಲೂ ನಮ್ಮನ್ನು ವಾಸಮಾಡಲು ಒತ್ತುವರಿದಾರರು ಬಿಡುತ್ತಿಲ್ಲ.ಅರಕಲಗೋಡಿನಲ್ಲಿ ನಾವೆಲ್ಲ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದೇವೆ ಎಂದು ಅಳಲು ತೋಡಿಕೊಂಡರು.
ನಮ್ಮ ಸ್ವಂತ ಊರಿನಲ್ಲೂ ನಮಗೆ ಬದುಕಲು ಜಮೀನು ಹಾಗು ತಲೆಯಮೇಲೊಂದು ಸೂರಿಲ್ಲ.ನಾವು ವಿಷಕುಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಯಾರನ್ನು ಎಂದು ನ್ಯಾಯ ಕೇಳುವುದು ಎಂದು ಕಣ್ಣೀರಾದರು.
ಈ ವೇಳೆ ಉಪ ತಹಸೀಲ್ದಾರ್ ಶ್ರೀದೇವಿ,ರಾಜಸ್ವ ನಿರೀಕ್ಷಕ ಅಭಿಲಾಷ್,ಗ್ರಾಮ ಲೆಕ್ಕಿಗ ಚಂಗಪ್ಪ,ತಾಲೂಕು ಸರ್ವೇಕ್ಷಣಾಧಿಕಾರಿ ಗಣೇಶ್,ಜೀತ ಮುಕ್ತ ಗೋವಿಂದಯ್ಯ,ದಾಸಯ್ಯ,ಶಿವಯ್ಯ,ಕಾಳಮ್ಮ,ಲಕ್ಕಮ್ಮ ಹಾಗೂ ಇನ್ನಿತರರು ಇದ್ದರು.
ಹಾಸನ ಜಿಲ್ಲೆಯಲ್ಲಿ ಅದರಲ್ಲೂ ಸಕಲೇಶಪುರ ತಾಲೂಕಿನಲ್ಲಿ ಸಾಕಷ್ಟು ಜನ ದ,ಲಿತ ನಾಯಕರುಗಳಿದ್ದಾರೆ.ಒಂದಷ್ಟು ಜನ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಘಟಾನುಘಟಿಗಳು ಇದ್ದಾರೆ.ದಯಮಾಡಿ ಯಾರಾದರೂ ಒಬ್ಬರು ಈ ಬಡ ಜೀತಮುಕ್ತ ಪಾಪಿ ಜೀವಗಳ ಬೆಂಬಲಕ್ಕೆ ನಿಂತು ನ್ಯಾಯ ಕೊಡಿಸಲು ಮುಂದಾಗುತ್ತಾರಾ?ಕಾದು ನೋಡಬೇಕು.
—————————————-ನೂರ್ ಅಹಮ್ಮದ್