ಅರಕಲಗೂಡು;ಸಕಲೇಶಪುರ ತಾಲೂಕು ಶರಣ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷರನ್ನಾಗಿ ಲೋಹಿತ್ ಕೌಡಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದ್ದು,ಪರಿಷತ್ತಿನ ಮುಂದಿನ ಕಾರ್ಯಕ್ರಮಗಳ ಯೋಜನೆಗಳನ್ನು ರೂಪಿಸಲು ಅನುಮತಿಸಲಾಗಿದೆ.ಈ ಮಹತ್ತರವಾದ ಜವಾಬ್ದಾರಿಯ ಜೊತೆ ಜೊತೆಗೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಸನ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರು ಕೂಡ ಆಗಿರುವ ಶ್ರೀಯುತರು ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮ ಕಾರ್ಯಕ್ರಮಗಳ ಮೂಲಕ ತಮ್ಮ ಹುದ್ದೆಗಳಿಗೆ ನ್ಯಾಯ ಒದಗಿಸಿಕೊಡುತ್ತೀರಿ ಎಂಬ ನಂಬಿಕೆಯನ್ನು ಹೊಂದಿದ್ದೇವೆ ಎಂದು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಎನ್. ಕುಮಾರಸ್ವಾಮಿ ಹೇಳಿದರು.
ರಾಮನಾಥಪುರದ ಶ್ರೀ ರಾಘವೇಂದ್ರಸ್ವಾಮಿ ಸಭಾಂಗಣದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಸಕಲೇಶಪುರ ತಾಲೂಕಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡ ಲೋಹಿತ್ ಕೌಡಹಳ್ಳಿ ರವರಿಗೆ ನೇಮಕ ಪತ್ರವನ್ನು ನೀಡಿ ಅಭಿನಂದನೆಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ಲೋಹಿತ್ ಕೌಡಹಳ್ಳಿ ಮಾತನಾಡಿ ದೊಡ್ಡದೊಂದು ಜವಾಬ್ದಾರಿ ನನ್ನ ಹೆಗಲೇರಿದೆ ಯಾವುದೇ ಲೋಪದೋಷಗಳು ಬಾರದ ಹಾಗೆ ಶರಣ ಸಾಹಿತ್ಯ ಪರಿಷತ್ತಿನ ಏಳ್ಗೆಗಾಗಿ ದುಡಿಯಲಿದ್ದೇನೆ.ಅತ್ಯಂತ ಶ್ರೀಮಂತ ಪುರಾತನ ಪರಂಪರೆಯ ಸಾಹಿತ್ಯವನ್ನು ಇಂದಿನ ಯುವ ಪೀಳಿಗೆಗೆ ಮುಟ್ಟಿಸುವ ಮಹತ್ಕಾರ್ಯದ ಜೊತೆಗೆ ಮುಂದಿನ ತಲೆಮಾರಿಗೂ ಉಳಿಸುವ ನಿಟ್ಟಿನಲ್ಲಿ ಶ್ರಮ ವಹಿಸಿ ಕೆಲಸ ನಿರ್ವಹಿಸುವುದಾಗಿ ಸಭೆಗೆ ವಾಗ್ಧಾನ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಂಜುಂಡಸ್ವಾಮಿ,ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಕೋಶಾಧಿಕಾರಿ ಆರ್ ರುದ್ರಸ್ವಾಮಿ,ಅರಕಲಗೂಡು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಕೇರಳಾಪುರ ವಿನಯ್, ಸದಸ್ಯರುಗಳಾದ ಸಕಲೇಶಪುರ ಸೋಮಶೇಖರ್,ಮೋಷ,ಧರ್ಮ, ಅನಂದ್,ರೇವಣ್ಣ ಮುಂತಾದವರಿದ್ದರು.
————————ಶಶಿಕುಮಾರ್ ಕೆಲ್ಲೂರು