ತಮ್ಮ ಹುಟ್ಟುಹಬ್ಬದ ದಿನ “UI” ಚಿತ್ರದ ಬಗ್ಗೆ ಮಾಹಿತಿ ನೀಡಿದ ರಿಯಲ್ ಸ್ಟಾರ್.

ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಬಹು ನಿರೀಕ್ಷಿತ ಈ ಚಿತ್ರ ಅಕ್ಟೋಬರ್ ನಲ್ಲಿ ತೆರೆಗೆ.

ಸೆಪ್ಟೆಂಬರ್‌ 18 ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ. ಈ ದಿನದಂದು ಅವರು ನಟಿಸಿ, ನಿರ್ದೇಶಿಸಿರುವ ಬಹು ನಿರೀಕ್ಷಿತ “UI” ಚಿತ್ರದ ಬಗ್ಗೆ ಮಾತನಾಡಿ, ಹೆಚ್ಚಿನ ಮಾಹಿತಿ ನೀಡಿದ್ದಾರೆ‌. ಹುಟ್ಟುಹಬ್ಬದ ದಿನ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ “UI” ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಟ, ನಿರ್ದೇಶಕ ಉಪೇಂದ್ರ, ನಿರ್ಮಾಪಕರಾದ ಜಿ.ಮನೋಹರನ್, ಕೆ.ಪಿ.ಶ್ರೀಕಾಂತ್, ಸಹ ನಿರ್ಮಾಪಕರಾದ ನವೀನ್, ತುಳಸಿರಾಮ ನಾಯ್ಡು(ಲಹರಿ ವೇಲು), ನಾಯಕಿ ರೀಶ್ಮಾ ನಾಣಯ್ಯ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಕಲಾ ನಿರ್ದೇಶಕ ಶಿವಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ “UI” ಚಿತ್ರದ ವಿಭಿನ್ನ ಪೋಸ್ಟರ್ ಸಹ ಬಿಡುಗಡೆಯಾಗಿದೆ.

ನನ್ನ‌ ಹುಟ್ಟುಹಬ್ಬಕ್ಕೆ ಹಾರೈಸಿರುವ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಮಾತನಾಡಿದ ಉಪೇಂದ್ರ ಅವರು, ಐದಾರು ಮದುವೆ ಆಗಬಹುದು. ಆದರೆ ಒಂದು ಚಿತ್ರ ನಿರ್ದೇಶನ ಮಾಡುವುದು ಅದಕ್ಕಿಂತ ಕಷ್ಟ. ಇನ್ನೂ ನಾನು ಬಹಳ ವರ್ಷಗಳ ನಂತರ ನಿರ್ದೇಶಿಸಿರುವ “UI” ಚಿತ್ರ ಬಿಡುಗಡೆಯ ಹಂತಕ್ಕೆ ತಲುಪಿದೆ. ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿರುವ ನಿರ್ಮಾಪಕರು ಅಕ್ಟೋಬರ್ ನಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ತಾಂತ್ರಿಕ(ಟೆಕ್ನಿಕಲ್) ಕಾರ್ಯಗಳು ಹೆಚ್ಚಾಗಿರುವುದು ಹಾಗೂ ಸಿನಿಮಾ ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಬರುತ್ತಿರುವುದರಿಂದ ಬಿಡುಗಡೆ ಸ್ವಲ್ಪ ವಿಳಂಬವಾಗುತ್ತಿದೆ. ಜನರು ಯಾವಗಲೂ ನನಗೆ ತಲೆಯಲ್ಲಿ ಹುಳ ಬಿಡುತ್ತೀರಾ ಎನ್ನುತ್ತಾರೆ. ಅದರೆ ಈ ಚಿತ್ರದಲ್ಲಿ ಹುಳ ತೆಗೆಯುವ ಕೆಲಸ ಮಾಡುತ್ತಿದ್ದೇನೆ. ಪ್ರೇಕ್ಷಕರು ನಮಗಿಂತ ತುಂಬಾ ಬುದ್ದಿವಂತರು. ಅವರ ನಿರೀಕ್ಷೆ ಹೆಚ್ಚು ಇರುತ್ತದೆ. ಅದಕ್ಕೆ ತಕ್ಕ ಹಾಗೆ ಸಿನಿಮಾ ಮಾಡುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಎಲ್ಲಾ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ “UI” ಉತ್ತಮ ಚಿತ್ರವಾಗಿ ಬರಲಿದೆ ಎಂದರು.

ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಮಾತನಾಡಿದ ನಿರ್ಮಾಪಕ ಜಿ.ಮನೋಹರನ್, ಇದು ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದ ಬಿಡುಗಡೆ ಸ್ವಲ್ಪ ತಡವಾಯಿತು.ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ತಿಳಿಸಿದರು.

25 ವರ್ಷಗಳ ನನ್ನ ಸಿನಿ ಜರ್ನಿಯಲ್ಲಿ ಶಿವಣ್ಣ ಅವರ ಜೊತೆಗಿನ ಒಡನಾಟ ಹಾಗೂ ಉಪೇಂದ್ರ ಅವರು ನಮ್ಮ ಬ್ಯಾನರ್ ನ ಚಿತ್ರವನ್ನು ನಿರ್ದೇಶಿಸಿರುವುದು ನನಗೆ ತುಂಬಾ ಖುಷಿಕೊಟ್ಟ ವಿಚಾರ. ಎಲ್ಲರಂತೆ ನಾನು ಉಪೇಂದ್ರ ಅವರ ನಿರ್ದೇಶನಕ್ಕೆ ಅಭಿಮಾನಿ. ಈ ಚಿತ್ರವನ್ನು ತೆರೆಯ ಮೇಲೆ ನೋಡುವ ಕಾತುರ ಅವರ ಅಭಿಮಾನಿಗಳಂತೆ ನನಗೂ ಇದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತೇವೆ ಎಂದರು ನಿರ್ಮಾಪಕ ಕೆ.ಪಿ.ಶ್ರೀಕಾಂತ್.

ಸಹ ನಿರ್ಮಾಪಕರಾದ ನವೀನ್, ತುಳಸಿರಾಮ ನಾಯ್ಡು(ಲಹರಿ ವೇಲು), ನಾಯಕಿ ರೀಶ್ಮಾ ನಾಣಯ್ಯ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಅವರು “UI” ಚಿತ್ರದ ಬಗ್ಗೆ ಮಾತನಾಡಿದರು.

Leave a Reply

Your email address will not be published. Required fields are marked *

× How can I help you?