ಕೆ.ಆರ್.ಪೇಟೆ,ಮೇ.06: ತಾಲೂಕಿನ ಬ್ರಾಹ್ಮಣರ ವಿದ್ಯಾರ್ಥಿ ನಿಲಯದ ಕಟ್ಟಡದ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪ್ರಸಾದದ ರೂಪದಲ್ಲಿ ನೀಡಿದ ಎರಡು ಲಕ್ಷರೂ ಸಹಾಯ ಧನದ ಚೆಕ್ ಅನ್ನು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಯೋಗೇಶ್ ವಿತರಣೆ ಮಾಡಿದರು.
ಚೆಕ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಜನಜಾಗೃತಿ ಸಮತಿ ನಿರ್ದೇಶಕರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್ ಮಾತನಾಡಿ ಸಂಸ್ಕೃತಿ ಸಂಸ್ಕಾರವನ್ನು ಕಾಪಾಡಿ ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಬ್ರಾಹ್ಮಣ ಸಮಾಜದ ಕೊಡುಗೆ ಅಪಾರ.ವಾಗಿದೆ. ನಮ್ಮ ಆಚಾರ ವಿಚಾರಗಳು ಸೇರಿದಂತೆ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಬ್ರಾಹ್ಮಣ ಸಮುದಾಯದ ಕೊಡುಗೆಯು ಸಮಾಜಕ್ಕೆ ಅಪಾರವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ಸಮಿತಿಯ ನಿರ್ದೇಶಕ ಎಸ್.ಅಂಬರೀಶ್ ಹೇಳಿದರು.

ಒಂದು ಚುನಾಯಿತ ಸರ್ಕಾರವು ಮಾಡಲಾರದಂತಹ ಕೆಲಸ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯ ಖಾವಂದರು ಮಾಡುತ್ತಿದ್ದಾರೆ. ಮಹಿಳಾ ಸಬಲೀಕರಣ ಸೇರಿದಂತೆ ಗ್ರಾಮಗಳ ಸಮಗ್ರವಾದ ಅಭಿವೃದ್ಧಿಗೆ ಬೇಕಾದ ಕೆಲಸ ಕಾರ್ಯಗಳು ಶರವೇಗದಲ್ಲಿ ನಡೆಯುತ್ತಿರುವುದೇ ಸಾಕ್ಷಿಯಾಗಿದೆ ಎಂದು ಅಂಬರೀಶ್ ಅಭಿಮಾನದಿಂದ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೇಶ್ ಮಾತನಾಡಿ ಧರ್ಮಸ್ಥಳ ಸಂಸ್ಥೆಯು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಗ್ರಾಮಾಭಿವೃದ್ಧಿಗೆ ಪೂರಕವಾಗಿ ಕೃಷಿಕರಿಗೆ ಶಕ್ತಿ ನೀಡುವ ಕೆಲಸ ಮಾಡುತ್ತಿದೆ. ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಮೂಲಕ ಪುರಾತನ ದೇವಾಲಯಗಳನ್ನು ಪುನರುಜ್ಜೀವನ ಗೊಳಿಸಿ ದೇವಾಲಯಗಳನ್ನು ಉಳಿಸಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಬೆಳೆಸುವ ಕೆಲಸ ಮಾಡುತ್ತಿದೆ ಎಂದು ಯೋಗೀಶ್ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ತಿಲಕ್ ರಾಜ್, ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅರವಿಂದ ಕಾರಂತ್, ಉಪಾಧ್ಯಕ್ಷ ರಘುರಾಮನಾಡಿಗ್, ಖಜಾಂಚಿ ಸುಬ್ಬಣ್ಣ, ಕಾರ್ಯದರ್ಶಿ ಕುಪ್ಪಹಳ್ಳಿ ಸುಬ್ರಹ್ಮಣ್ಯ, ಶ್ರೀ ರಾಮಂದಿರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ.ಆರ್.ಅನಂತರಾಮಯ್ಯ ಸೇರಿದಂತೆ ನೂರಾರು ಬ್ರಾಹ್ಮಣ ಮಹಾಸಭಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.