ತುಮಕೂರು ವಿವಿಯಲ್ಲಿ ವಿಜೃಂಭಣೆಯ ‘ಕಲ್ಪತರು ಉತ್ಸವ’-ಸಿನಿಮಾ ತಾರೆಯರಾದ ಅನಿರುದ್ಧ ಜಟ್ಕರ್,ಅನುಷಾರಾಯ್ ಹಾಗೂ ದೀಪಿಕಾ ದಾಸ್ ಬಾಗಿ

ತುಮಕೂರು:ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಕಲ್ಪತರು ಉತ್ಸವದ ಸಂಭ್ರಮದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ಸಿನಿಮಾ ತಾರೆಯರಾದ ಅನಿರುದ್ಧ ಜಟ್ಕರ್,ಅನುಷಾರಾಯ್ ಹಾಗೂ ದೀಪಿಕಾ ದಾಸ್ ಉತ್ಸವದ ಮೆರುಗನ್ನು ಹೆಚ್ಚಿಸಿದರು.

ಕಲಾತಂಡಗಳ ಮೆರವಣಿಗೆಯಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿ ಸಾಂಪ್ರದಾಯಿಕ ಉಡುಗೆ-ತೊಡುಗೆಗಳೊಂದಿಗೆ ವಿವಿಧ ಕಲಾಪ್ರಕಾರಗಳನ್ನು ಪ್ರತಿನಿಧಿಸಿದರು. ವೀರಗಾಸೆ, ಯಕ್ಷಗಾನ, ಕೋಲಾಟ, ಡೊಳ್ಳುಕುಣಿತ ಹೀಗೆ 20ಕ್ಕೂ ಹೆಚ್ಚು ವಿದ್ಯಾರ್ಥಿ ಕಲಾತಂಡಗಳು ಭಾಗವಹಿಸಿದವು.ಮೆರವಣಿಗೆ ತುಮಕೂರು ವಿಶ್ವವಿದ್ಯಾನಿಲಯದಿಂದ ಆರಂಭವಾಗಿ ಶಿವಕುಮಾರ ಸ್ವಾಮೀಜಿ ವೃತದ ಮೂಲಕ ಸಾಗಿತು.

ಚಿತ್ರನಟ ಅನಿರುದ್ಧ ಜಟ್ಕರ್ ಮಾತನಾಡಿ,ನಮ್ಮ ಚಿಂತನೆಗಳು ಯಾವಾಗಲೂ ಸಕಾರಾತ್ಮಕವಾಗಿರಬೇಕು.ವಿದ್ಯೆ ಎಂಬುದು ಶಕ್ತಿಯುತವಾದ ಆಯುಧ.ವಿದ್ಯೆಯನ್ನು ಸಕಾರಾತ್ಮಕವಾದ ಕಾರ್ಯಗಳಿಗೆ ಬಳಸಿಕೊಂಡರೆ ಸಮಾಜದಲ್ಲಿರುವ ಕೊಳಕನ್ನು ತೊಳೆಯಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.

ಶಿಕ್ಷಣ ಕೇವಲ ಉದ್ಯೋಗಕ್ಕೆ ಸೀಮಿತವಾಗಬಾರದು.ಸಾಮಾಜಿಕ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು
ಎಂದರು.

ನಟಿ ಅನುಷಾರಾಯ್ ಮಾತನಾಡಿ, ಯಾರೂ ಕದಿಯಲು ಸಾಧ್ಯವಾಗದ ಎರಡು ವಿಷಯಗಳೆಂದರೆ ವಿದ್ಯೆ ಮತ್ತು ಕಲೆ. ಶಿಕ್ಷಣ ಬದುಕಿಗೆ ಬಹಳ ಮುಖ್ಯವಾದ ಅಂಶ.ವಿದ್ಯಾರ್ಥಿ ಬದುಕು ಜೀವನದ ಒಂದು ದೊಡ್ಡಘಟ್ಟ.ಈ ಹಂತದಲ್ಲಿ ನಿಮ್ಮ ಪ್ರತಿಭೆಗಳನ್ನು ನೀವೇ ಗುರುತಿಸಿಕೊಳ್ಳಬೇಕು ಎಂದರು.

ಮತ್ತೋರ್ವ ನಟಿ ದೀಪಿಕಾ ದಾಸ್ ಮಾತನಾಡಿ, ಶಿಕ್ಷಣದ ಜೊತೆ ಜೊತೆಯಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಸಾಂಸ್ಕೃತಿಕ ನಗರ ಎಂದೇ ಪ್ರಸಿದ್ಧವಾದ ಈ ನಾಡಿನಲ್ಲಿ ಹುಟ್ಟಿ ಬೆಳೆದಿರುವಂತಹ ಪ್ರತಿಭೆಗಳು ಬಹಳ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ವೆoಕಟೇಶ್ವ ರಲು, ಶಿಕ್ಷಣವೆಂಬುದು ಕೇವಲ ಅಕ್ಷರ ಕಲಿಕೆಯಲ್ಲಿ ಮಾತ್ರ ಇರುವುದಿಲ್ಲ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಲು ವೇದಿಕೆ ಸೃಷ್ಟಿ ಮಾಡುವುದು ಕೂಡ ಶಿಕ್ಷಣ ಸಂಸ್ಥೆಗಳ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾಜಮ್‌ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್.ಕೆ. ಉಪಸ್ಥಿತರಿದ್ದರು.ಸಾಂಸ್ಕೃತಿಕ ಚಟುವಟಿಕೆಗಳ ಘಟಕದ ಸಂಯೋಜಕಡಾ. ದೇವರಾಜು.ಎಸ್. ಸ್ವಾಗತಿಸಿದರು. ವಿದ್ಯಾರ್ಥಿ.ಕ್ಷೇಮಪಾಲನಾ ಘಟಕದ ನಿರ್ದೇಶಕ ಪ್ರೊ.ಬಸವರಾಜು.ಜಿ. ವಂದಿಸಿದರು.ಸಹಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ.ಕೆ.ವಿ. ನಿರೂಪಿಸಿದರು.

———————–—-ಕೆ.ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?