ಮಧುಗಿರಿ : ಕಂದಾಯ ಇಲಾಖೆಯಲ್ಲಿ ಸುಮಾರು ವರ್ಷಗಳ ಹಿಂದೆ ಸಾಗುವಳಿ ನೀಡಿ ಖಾತೆ, ಪಹಣಿಯಾಗಿದ್ದರೂ ದುರಸ್ಥಿಯಾಗಿಲ್ಲ ಹಾಗೂ ಇತ್ತೀಚೆಗೆ ಪಹಣಿಯಲ್ಲಿ ಒಟ್ಟುಗೂಡಿಸುವಿಕೆಯಿಂದಾಗಿ ಹಲವಾರು ರೈತರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ತಾಲ್ಲೂಕು ಕಛೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರತಿಭಟಿಸಿ, ರೈತರಿಗೆ ಅನುಕೂಲ ಮಾಡಿಕೊಡಲು ನಾನು ಬದ್ಧನಾಗಿದ್ದು, ಪಕ್ಷ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತೇನೆ ಎಂದು ತಾಲ್ಲೂಕು ಬಿ.ಜೆ.ಪಿ. ಮಂಡಲದ ನೂತನ ಅಧ್ಯಕ್ಷ ಹನುಮಂತರೆಡ್ಡಿ ತಿಳಿಸಿದರು.
ಅವರು, ಮಧುಗಿರಿ ಶಕ್ತಿದೇವತೆ ಶ್ರೀ ದಂಡಿನ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ, ಬಿ.ಜೆ.ಪಿ.ಯ ಮಧುಗಿರಿ ಜಿಲ್ಲಾ ಘಟಕ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿ ಕಾರ್ಯಕರ್ತರ ಹಾಗೂ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಮುಂದಿನ ದಿನಗಳಲ್ಲಿ ಗ್ರಾಮ ಹಂತದಲ್ಲಿ ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಿ, ಮುಂಬರುವ ಜಿ.ಪಂ ಹಾಗೂ ತಾ.ಪಂ. ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.
ಈ ವೇಳೆ ವಕೀಲರು ಹಾಗೂ ನಿಕಟಪೂರ್ವ ಅಧ್ಯಕ್ಷ ನಾಗೇಂದ್ರ, ಮಾಜಿ ಅಧ್ಯಕ್ಷ ಪಾಂಡುರಂಗಾರೆಡ್ಡಿ, ನಾಗರಾಜು, ಮಂಜುನಾಥ್ ಹಾಗೂ ಕಾರ್ಯದರ್ಶಿಗಳಾದ ಹರೀಶ್ ಮತ್ತು ಮಧುಗಿರಿ ತಾಲ್ಲೂಕಿನ ಬಿ.ಜೆ.ಪಿ. ಪಕ್ಷದ ಮುಖಂಡರು ಮುಂತಾದವರು ಹಾಜರಿದ್ದರು.