ತುಮಕೂರು: ಕೇಂದ್ರ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ರವರು ಸತತ 8ನೇ ಕೇಂದ್ರ ಬಜೆಟ್ ಮಂಡಿಸಿದ ಮಹಿಳಾ ಸಚಿವೆ ಎಂಬ ಖ್ಯಾತಿಗೆ ಪಾತ್ರವಾಗಿರುವುದಕ್ಕೆ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಪಿ. ಆರ್. ಕುರಂದವಾಡ ಅಭಿನಂದನೆ ಸಲ್ಲಿಸಿದರು.
ಇಂದು ಸಚಿವೆ ನಿರ್ಮಾಲ ಸೀತಾರಾಮನ್ ಮಂಡಿಸಿದ ಬಜೆಟ್ ಕುರಿತು ಮಾತನಾಡಿದ ಅವರು, 2025 ನೇ ಸಾಲಿನ ಬಜೆಟ್ ನಲ್ಲಿ ಪ್ರಮುಖವಾಗಿ ರಫ್ತು ಮಾಡುವ ಎಂಎಸ್ಎಂಇ ಗಳಿಗೆ 20 ಕೋಟಿಯವರೆಗೆ ಸಾಲ ಸೌಲಭ್ಯ, ಸ್ಟಾರ್ಟ್ಪ್ ಗಳಿಗೆ 27 ವಲಯಗಳಲ್ಲಿ ಸಾಲ ಯೋಜನೆ, 120 ನಗರಗಳಲ್ಲಿ ಹೊಸ ಏರ್ಪೋರ್ಟ್ ಸ್ಥಾಪನೆ, 5.7 ಕೋಟಿ ಕಾರ್ಮಿಕ ಆಧಾರಿತ ಎಂಎಸ್ಎಂಇ ಗಳಿಗೆ ವಿಶೇಷ ಯೋಜನೆ, ಒಂದು ಕೋಟಿ ಗಿಗ್ ಕಾರ್ಮಿಕರಿಗೆ ಹೆಲ್ತ್ ಇನ್ಶೂರೆನ್ಸ್, ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಯೋಜನೆ, ಹೊಸ ಉದ್ಯೋಗ ಸೃಷ್ಟಿಗೆ ಪ್ರವಾಸಿ ಕೇಂದ್ರಗಳಲ್ಲಿ ಒತ್ತು, 120 ಹೊಸ ಕೇಂದ್ರಗಳಿಗೆ ವಿಮಾನ ಸಂಪರ್ಕಕ್ಕೆ ಆದ್ಯತೆ, ಸ್ಥಳೀಯ ಮಟ್ಟದ ಉತ್ಪಾದನೆಗಳ ರಫ್ತಿಗೆ ಆದ್ಯತೆ, ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಗೆ ಆದ್ಯತೆ, ವಿಮಾಕ್ಷೇತ್ರದಲ್ಲಿ 100% ವಿದೇಶಿ ಹೂಡಿಕೆ, ರಫ್ತು ಉತ್ತೇಜನಕ್ಕೆ ಮಂಡಳಿ ಸ್ಥಾಪನೆ, ಡಿಜಿಟಲ್ ವ್ಯಾಪಾರ ವೃದ್ಧಿಗಾಗಿ ಉತ್ತೇಜನ, ಇನ್ಶೂರೆನ್ಸ್ ವಲಯದಲ್ಲಿ ಶೇಕಡ 100ರಷ್ಟು ಎಫ್ ಡಿಐಗೆ ಅವಕಾಶ, ನಗರ ಅಭಿವೃದ್ಧಿಗಾಗಿ ಒಂದು ಲಕ್ಷಕೋಟಿ ಅನುದಾನ, ಹಿರಿಯ ನಾಗರಿಕರಿಗೆ ಒಂದು ಲಕ್ಷದವರೆಗೂ ಟಿಡಿಎಸ್ ನಿಂದ ವಿನಾಯಿತಿ, ಹಾಗೂ 12 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ, 12 ಲಕ್ಷದಿಂದ 16 ಲಕ್ಷ ಆದಾಯಕ್ಕೆ 15%, 16 ಲಕ್ಷದಿಂದ 20 ಲಕ್ಷ ಆದಾಯಕ್ಕೆ 20%, 20 ಲಕ್ಷದಿಂದ 24 ಲಕ್ಷದವರೆಗೆ 25%, 24 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ 30% ತೆರಿಗೆಯನ್ನು ವಿಧಿಸಲಾಗಿದ್ದು, ಈ ಬಜೆಟ್ ಕೈಗಾರಿಕೋದ್ಯಮಿಗಳ, ವಾಣಿಜ್ಯೋದ್ಯಮಿಗಳ, ಜನಸಾಮಾನ್ಯರ, ಮಧ್ಯಮ ವರ್ಗದವರ, ವ್ಯಾಪಾರಸ್ಥರ ಬಜೆಟ್ ಆಗಿರುವುದು ಸ್ವಾಗರ್ಹ. ಆದರೆ ಈ ಬಜೆಟ್ ನಲ್ಲಿ ಅಂದುಕೊಂಡಂತೆ ತುಮಕೂರು ಜಿಲ್ಲೆಗೆ ವಿಶೇಷ ಪ್ರಾತಿನಿಧ್ಯತೆಯನ್ನು ನೀಡದಿರುವುದು ಕಂಡು ಬಂದಿರುವುದು ಬೇಸರದ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ವರದಿ- ಕೆ.ಬಿ.ಚಂದ್ರಚೂಡ್