ತುಮಕೂರು- ಸಂಗೀತ ಜೀವನದಲ್ಲಿ ಅತಿ ಮುಖ್ಯವಾದದ್ದು. ಬಾಲ್ಯದಿಂದಲೇ ಮಕ್ಕಳಲ್ಲಿ ನೃತ್ಯ ಅಭ್ಯಾಸ ಮಾಡುತ್ತಾ ಬಂದರೆ ನಮ್ಮ ಸಮಾಜಕ್ಕೆ ಒಂದು ಕೊಡುಗೆ ನೀಡಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಸಿರಾಗೇಟ್ ಶ್ರೀ ಶಾರದಾ ಸ್ಕೂಲ್ ಆಫ್ ಫೈನ್ ಆರ್ಟ್ಸ್ ಶಾಲೆಯ ವತಿಯಂದ ಆಯೋಜಿಸಲಾಗಿದ್ದ, ಶ್ರೀ ಪುರಂದರದಾಸರ ಮತ್ತು ತ್ಯಾಗರಾಜರ ಆರಾಧನಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿ, ಮನುಷ್ಯನ ಜೀವನದಲ್ಲಿ ನೆಮ್ಮದಿ ಸುಖ ದೊರಕಬೇಕು ಎಂದರೆ, ಸಂಗೀತ ಹಾಗೂ ಸಾಹಿತ್ಯ ಲೋಕದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಾಗ ಮಾತ್ರ ಅದು ಸಾಧ್ಯವಾಗುತ್ತದೆ. ಪೋಷಕರು ಸಹ ತಮ್ಮ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಆ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು ಹಾಗೂ ಸಂಸ್ಕಾರ ಮತ್ತು ವಿನಯತೆಯನ್ನ ಮೈಗೂಡಿಸಿಕೊಂಡಲ್ಲಿ ಸಮಾಜಕ್ಕೆ ಉತ್ತಮ ಪ್ರಜೆ ನೀಡಿದಂತಾಗುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಾ. ಸಣ್ಣಹೊನ್ನಯ್ಯ ಕಂಟಲಗೆರೆ ಮಾತನಾಡಿ, ಸಿರಾ ಗೇಟ್ ಭಾಗದಲ್ಲಿ ಇರುವ ಮಕ್ಕಳು ಸಂಗೀತ ಹಾಗೂ ನೃತ್ಯ ಅಭ್ಯಾಸ ಮಾಡಲು ಶ್ರೀ ಶಾರದಾ ಸ್ಕೂಲ್ ಆಫ್ ಫೈನ್ ಆರ್ಟ್ಸ್ ಉತ್ತಮ ವೇದಿಕೆಯನ್ನು ನಿರ್ಮಿಸಿರುವುದನ್ನು ನಾನು ಅಭಿನಂದಿಸುತ್ತೇನೆ. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಪುರಂದರ ದಾಸರ ಕೊಡುಗೆ ಅಪಾರವಾಗಿದೆ. ಗುರುಗಳಿಗೆ ಗೌರವ ಭಾವದಿಂದ ಸಂಸ್ಕಾರವನ್ನು ಪಡೆದಾಗ ಜೀವನ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಸ್ಕೂಲ್ ಆಫ್ ಫೈನ್ ಆರ್ಟ್ಸ್ ವಿದೂಷಿ ರಮಾಮಣಿ, ಎಸ್., ವಿದೂಷಿ ಪಲ್ಲವಿ ಎಲ್., ನೃತ್ಯ ವಿದೂಷಿ ಶ್ರೀಲಕ್ಷ್ಮಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
- ಕೆ.ಬಿ. ಚಂದ್ರಚೂಡ್