ತುಮಕೂರು: ಮಕ್ಕಳ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದ್ದು,ಶಾಲಾ, ಕಾಲೇಜುಗಳಲ್ಲಿ ಕಲಿಯುತ್ತಿರುವ,ಹದಿ ಹರೆಯದ ವಯಸ್ಸಿನ ಗಂಡಾಗಲಿ, ಹೆಣ್ಣಾಗಲಿ ಸೋಷಿಯಲ್ ಮಿಡಿಯಾ ಬಳಸುವ ವೇಳೆ ಎಚ್ಚರಿಕೆಯಿಂದ ಇರುವಂತೆ ನ್ಯಾ.ನೂರುನ್ನಿಸಾ ಸಲಹೆ ನೀಡಿದ್ದಾರೆ.
ನಗರದ ಬಾಲಭವನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮೊಬಿಲಿಟಿ ಇಂಡಿಯಾ, ತುಮಕೂರು ಘಟಕದವತಿಯಿಂದ ಆಯೋಜಿಸಿದ್ದ ತುಮಕೂರು ಶೈಕ್ಷಣಿಕ ಜಿಲ್ಲೆಯ ಪ್ರೌಢ ಶಾಲಾ ಹಂತದ ಮಕ್ಕಳ ರಕ್ಷಣಾ ಸಮಿತಿಯನ್ನು ಪ್ರತಿನಿಧಿಸುವ ಮಕ್ಕಳಿಗೆ “ಶಾಲಾ ಮಟ್ಟದಲ್ಲಿ ಮಕ್ಕಳ ರಕ್ಷಣೆ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವೊಂದು ಸಂದರ್ಭದಲ್ಲಿ ನಮ್ಮಗೆ ಗೊತ್ತಿಲ್ಲದ ವ್ಯಕ್ತಿಯಿಂದ ಬರುವ ಯಾವುದೇ ಕೊಡುಗೆಗಳನ್ನು ಸ್ವೀಕರಿಸಬಾರದು ಎಂದು ಕಿವಿ ಮಾತು ಹೇಳಿದರು.

ವಿಶ್ವಸಂಸ್ಥೆಯೊಂದಿಗಿನ ಒಪ್ಪಂದದಂತೆ ಮಕ್ಕಳಿಗೆ ಹಲವಾರು ಹಕ್ಕುಗಳನ್ನು ನೀಡಿದೆ. ಅದರಲ್ಲಿ ಪ್ರಮುಖವಾದುದ್ದು, ಘನತೆಯಿಂದ ಬದುಕುವ ಹಕ್ಕು, ಒಂದು ವೇಳೆ ನಿಮಗೆ ಗೊತ್ತಿಲ್ಲದೆಯೋ, ಗೊತ್ತಿದ್ದೋ, ಸಮಾಜಘಾತಕರೊಂದಿಗೆ ಸಂಪರ್ಕ ಪಡೆದರೆ, ಜೀವನವೀಡಿ,ಜೈಲು, ಕೋರ್ಟು,ವಿಚಾರಣೆ ಎಂದು ಓಡಾಡುವುದರಿಂದ ನಿಮಗೆ ವಿದ್ಯಾಭ್ಯಾಸವೂ ಕುಂಠಿತವಾಗಲಿದೆ.ಅಲ್ಲದೆ ನಿಮ್ಮ ಬಾಲ್ಯವೂ ಇಲ್ಲದಂತಾಗುತ್ತದೆ. ಜಿಲ್ಲೆಯಲ್ಲಿ ಪ್ರತಿವರ್ಷದಿಂದ ವರ್ಷಕ್ಕೆ ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. 2025ರ ಜನವರಿ ತಿಂಗಳಲ್ಲಿಯೇ 18 ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಎಚ್ಚರಿಕೆಯ ಹೆಜ್ಜೆಗಳನ್ನಿಡುವಂತೆ ನ್ಯಾ.ನೂರುನ್ನಿಸಾ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ತಿಪ್ಪೇಸ್ವಾಮಿ ಕೆ.ಟಿ. ಅವರು ಮಾತನಾಡಿ, ಇಡೀ ಭಾರತದಲ್ಲಿಯೇ ಮೊದಲ ಬಾರಿಗೆ 2016 ರಲ್ಲಿ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ನೀತಿ-2016 ರೂಪಿಸಿದೆ. ನೀತಿ ರೂಪಿತವಾಗಿ 9 ವರ್ಷಗಳಾಗುತ್ತಾ ಬಂದಿದ್ದರೂ ಯಾವ ಶಾಲಾ, ಕಾಲೇಜುಗಳು ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ. ಹಾಗೂ ಸರಕಾರ ಪ್ರತಿವರ್ಷ ನವೆಂಬರ್ 14 ರಿಂದ ಜನವರಿ ೩೧ರವರೆಗೆ ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮಸಭೆಗಳನ್ನು ನಡೆಸಿ, ಮಕ್ಕಳ ಅಭಿಪ್ರಾಯಗಳನ್ನು ಆಲಿಸಲು ಕ್ರಮ ಕೈಗೊಂಡಿದೆ.ರಾಜ್ಯದ 5927 ೫೯೨೭ ಗ್ರಾಮಪಂಚಾಯಿತಿಗಳಲ್ಲಿ ಈ ರೀತಿಯ ಕಾರ್ಯಕ್ರಮ ನಡೆದಿದೆ. ಇದರ ಹಿಂದಿನ ಉದ್ದೇಶ ಮಕ್ಕಳ ಅಭಿಪ್ರಾಯಗಳಿಗೆ ಮನ್ನಣೆ ಸಿಗಬೇಕು.ಅವರು ಸಹ ಗ್ರಾಮದ ಅಭಿವೃದ್ದಿಯಲ್ಲಿ ಪಾಲುದಾರರಾಗಬೇಕು ಎಂಬುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಡಾ.ವಾಸುದೇವ ಶರ್ಮ, ಮೊಬಲಿಟಿ ಇಂಡಿಯಾದ ಹಿರಿಯ ಕಾರ್ಯಕ್ರಮ ಸಂಯೋಜನಾಧಿಕಾರಿ ಆನಂದ್ ಎಸ್.ಎನ್. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪವಿತ್ರ ಮಾತನಾಡಿದರು.ವೇದಿಕೆಯಲ್ಲಿ ಮೊಬಲಿಟಿ ಇಂಡಿಯಾದ ಅಧಿಕಾರಿಗಳು, ವಿವಿಧ ಶಾಲೆಗಳ ಮಕ್ಕಳು, ಶಿಕ್ಷಕರು ಪಾಲ್ಗೊಂಡಿದ್ದರು.
-ಕೆ.ಬಿ.ಚಂದ್ರಚೂಡ್