ಚಿಕ್ಕಮಗಳೂರು: ಪ್ರಪಂಚ ಕಂಡ ಅನುಕರಣೀಯ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ದಲಿತ ನಾಯಕರಾಗಿ ಬಿಂಬಿಸುವುದು ಸರಿಯೇ ಎಂಬ ಪ್ರಶ್ನೆ ಮುಂದಿಟ್ಟವರು ಎಂದು ಎಐಟಿ ಉಪನ್ಯಾಸಕ ಡಾ.ಎಂ.ಎ.ಗೌತಮ್ ಹೇಳಿದರು.
ವಿದ್ಯಾನಗರದ ‘ಕಡೂರ್ ನಿವಾಸ’ ಆವರಣದಲ್ಲಿ ರೋಟರಿ ಕಾಫಿಲ್ಯಾಂಡ್ ‘ಕುಟುಂಬ ಮಿಲನ’ ಕಾರ್ಯಕ್ರಮದಲ್ಲಿ ‘ಅಂಬೇಡ್ಕರ್ ಮತ್ತು ಸಂವಿಧಾನ’ ಕುರಿತಂತೆ ಅವರು ಸಂವಾದಿಸಿದರು.
1891 ರ ಏಪ್ರಿಲ್ 14 ರಂದು ಮಹಾರಾಷ್ಟ್ರ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೇವಾಡಿಯಲ್ಲಿ ಭೀಮರಾವ್ ರಾಮಜೀ ಅಂಬೇಡ್ಕರ್ ಜನನ. ತಂದೆ ರಾಮಜೀ ಸತ್ಪಾಲ್, ತಾಯಿ ಭೀಮಾಬಾಯಿಯರ 14 ನೆಯ ಮಗು.1907 ರಲ್ಲಿ 10ನೇಯ ತರಗತಿ ತೇರ್ಗಡೆ. 750 ಅಂಕಗಳಿಗೆ 282 ಅಂಕ ಗಳಿಕೆ. ಅಸ್ಪೃಶ್ಯವರ್ಗದ ಹಿಂದುಳಿದ ಸಮುದಾಯದ ಬಾಲಕ ಇಷ್ಟು ಪಡೆದದ್ದೆ ಆಗ ಹೆಗ್ಗಳಿಕೆ ಆಗಿತ್ತು. ಸಮಾಜ ಸುಧಾರಕ ಎಸ್.ಕೆ.ಬೋಲೆ ಮತ್ತು ನಿವೃತ್ತ ಶಿಕ್ಷಕ ಕೆ.ಎ.ಕಲಸ್ಕರ್ ನೇತೃತ್ವದಲ್ಲಿ ಬಾಲಕನನ್ನು ಗುರುತಿಸಿ, ಗೌರವಿಸಿ ಉಡುಗೊರೆಯಾಗಿ ನೀಡಿದ ಪುಸ್ತಕವೇ ಬೌದ್ಧಧರ್ಮ ಸ್ವೀಕಾರಕ್ಕೆ ಮೂಲಪ್ರೇರಣೆ ಎಂದು ಮುಂದೆ ಅಂಬೇಡ್ಕರ್ ಹೇಳಿಕೊಂಡಿದ್ದಾರೆ. ಎಂದು ಡಾ.ಗೌತಮ್ ವಿವರಿಸಿದರು.

ಬರೋಡ ಸರ್ಕಾರದ ರಕ್ಷಣಾ ಕಾರ‍್ಯದರ್ಶಿ ಮಹತ್ವದ ಹುದ್ದೆಯನ್ನು ಜಾತಿ ಬೇಧ ನೀತಿ ಪ್ರತಿಭಟಿಸಿ ತೊರೆದು ಕೆಲಕಾಲ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಾರೆ. ‘ಮೂಕನಾಯಕ’ ನಿಯತಕಾಲಿಕೆ ಮೂಲಕ ಹಿಂದೂಮೌಢ್ಯದ ವಿರುದ್ಧ ಜನಜಾಗೃತಿಗೆ ತೊಡಗಿದವರು. ಬಹಿಷ್ಕೃತ ಹಿತರಕ್ಷಣಾ ಸಭಾ ಸ್ಥಾಪಿಸಿ ಹೋರಾಡಿದವರು. ದಲಿತರಿಗಾಗಿ ಪ್ರತ್ಯೇಕ ಮತದಾನ ಪ್ರತಿಪಾದಿಸಿದವರು. 1932ರಲ್ಲಿ ಪೂನಾ ಒಪ್ಪಂದದ ಮೂಲಕ ದಲಿತರಿಗಾಗಿ ಸ್ಥಾನ ಮೀಸಲಾತಿ ಸೃಷ್ಟಿಸಿದವರೆಂದು ಬಣ್ಣಿಸಿದರು.

21ವರ್ಷ ಪೂರ್ಣಗೊಂಡ ಎಲ್ಲ ಪ್ರಜೆಗಳಿಗೂ ಮತದ ಹಕ್ಕು ಮತ್ತು ಮಹಿಳೆಯರಿಗೆ ಮತದಾನದ ಹಕ್ಕು ಪ್ರತಿಪಾದಿಸಿದ ಅಂಬೇಡ್ಕರ್, ಕಾಗೆ, ಎಮ್ಮೆ, ನಾಯಿ ಬಳಸುವ ಕೆರೆಯನೀರನ್ನು ದಲಿತರು ಬಳಸದಂತೆ ಪ್ರತಿಬಂಧಿಸಿದ ಕ್ರಮವನ್ನು ವಿರೋಧಿಸಿ 7000 ಜನರೊಂದಿಗೆ ಹೋರಾಡಿದವರು.
ಪಂಚವಾರ್ಷಿಕ ಯೋಜನೆ, ಆರ್‌ಬಿಐ ಸ್ಥಾಪನೆ, ಭಾಕ್ರಾ ಅಣೆಕಟ್ಟು ಅಂಬೇಡ್ಕರ್ ಪ್ರಯತ್ನದ ಫಲ ಎಂದ ಡಾ.ಗೌತಮ್, ಮಹಿಳೆಯರಿಗೆ ಆಸ್ತಿ-ಮೀಸಲು, ದತ್ತು ಸ್ವೀಕಾರದ ನಿಯಮಾವಳಿ ಒಳಗೊಂಡ ಹಿಂದೂ ಕೋಡ್ ಬಿಲ್ ಅನುಷ್ಠಾನಕ್ಕೆ ಅಡ್ಡಿಯಾದಾಗ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೇಸ್ ನೇತೃತ್ವದ ಸರ್ಕಾರದಿಂದ ಹೊರಬಂದವರು.
ಸಮಾಜದಲ್ಲಿ ಶೇ.6೦ರಷ್ಟಿರುವ ದುಡಿಯುವ ವರ್ಗವನ್ನು ಪ್ರತಿನಿಧಿಸುವ ಕಾರ್ಮಿಕರ ಪಕ್ಷ ಸ್ಥಾಪಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ಜೊತೆಗೆ 8ಗಂಟೆ ಕರ‍್ಯನಿರ್ವಹಣಾ ಪದ್ಧತಿ ಜಾರಿಗೊಳಿಸಿದವರೆಂದರು.

ಎರಡು ಸ್ನಾತಕೋತ್ತರ ಪದವಿ, ನಾಲ್ಕು ಪಿಎಚ್‌ಡಿ, 64ವರ್ಷ ಭಾಷೆಗಳನ್ನು ಅರಿತಿದ್ದ ಅಂಬೇಡ್ಕರ್ 9 ಭಾಷೆಗಳಲ್ಲಿ ಪ್ರಾವೀಣ್ಯತೆ ಗಳಿಸಿದ ಮಹಾನ್ ಮೇಧಾವಿ, ಮಹಾನ್ ಮಾನವತಾವಾದಿ. ಆದರೂ ಅವರನ್ನು ಒಂದು ವರ್ಗದ ನಾಯಕರಾಗಿ ಬಿಂಬಿಸಿರುವುದು ರ್ದುದೈವ ಸಂಗತಿ ಎಂದು ಡಾ.ಗೌತಮ್ ವ್ಯಾಖ್ಯಾನಿಸಿದರು.
ಅಧ್ಯಕ್ಷತೆವಹಿಸಿದ್ದ ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ತನೂಜ್ ಸ್ವಾಗತಿಸಿ, ಸಹಕರ‍್ಯದರ್ಶಿ ಆನಂದ್ ವಂದಿಸಿದರು. ಮಾಜಿಸಹಾಯಕ ಗರ‍್ನರ್ ಗುರುಮೂರ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರುದ್ರೇಶಕಡೂರ್ ಮತ್ತು ಯಶೋಧ ದಂಪತಿಗಳನ್ನು ಕ್ಲಬ್‌ವತಿಯಿಂದ ಸನ್ಮಾನಿಸಲಾಯಿತು. ಸುಂದರಲಕ್ಷ್ಮಿ ಪ್ರಾರ್ಥಿಸಿದರು. ಸಂಗೀತ ಸಂಜೆ ಜನಮನ ಸೆಳೆಯಿತು.