ತುಮಕೂರು: ಗೌರಿಶಂಕರ್ ನನ್ನ ವಿರುದ್ಧ ಹಲವು ವೈಯಕ್ತಿಕ ಆರೋಪ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇತ್ತೀಚೆಗೆ ಗುದ್ದಲಿ ಪೂಜೆ ಆದ ಕ್ರಿಕೆಟ್ ಸ್ಟೇಡಿಯಂನಲ್ಲಿ ನನಗೆ ಕಮೀಷನ್ ಸಿಕ್ಕಿಲ್ಲ ಎಂದು ಆರೋಪ ಮಾಡಿದ್ದಾರೆ.
ಅವರೂ ಗಾಜಿನ ಮನೆಯಲ್ಲಿದ್ದಾರೆ ನಾನೂ ಇದ್ದೇನೆ,ನಾನು ಸಂಸ್ಕಾರವಂತ,ಅವರು ಬಳಸಿದ ಭಾಷೆಯನ್ನು ನಾನು ಬಳಸುವುದಿಲ್ಲ ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬಹುದು ಎಂದು ಶಾಸಕ ಬಿ.ಸುರೇಶ್ ಗೌಡ ಅವರು ಗೌರಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ತುಮಕೂರಿನಲ್ಲಿ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪರಮೇಶ್ವರ್ ರವರು ನಮಗೆ ನೀಡದ ಮಾತ ಉಳಿಸಿಕೊಂಡಿಲ್ಲ,ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ರಾಮನಗರಕ್ಕೆ ತೆಗೆದುಕೊಂಡು ಹೋದರೆ ನಮ್ಮ ಜಿಲ್ಲೆಯ 7 ತಾಲ್ಲೋಕುಗಳಿಗೆ ತೀವ್ರ ತೊಂದರೆಯಾಗಲಿದೆ,ಗೌರಿಶಂಕರ್ ತಂದೆ ಚೆನ್ನಿಗಪ್ಪ ಅವರ ಬಗ್ಗೆ ನಾವು ಅನೇಕ ಕಥೆಗಳನ್ನು ಕೇಳಿದ್ದೇವೆ.
ಅವರು ಕಾನ್ಸ್ಟೇಬಲ್ ಆಗಿದ್ದರು. ಶಾಸಕರಾಗಿ ಸಚಿವರಾಗಿದ್ದ ಸಂದರ್ಭದಲ್ಲಿ ಅವರ ಇಂಜಿನಿಯರಿಂಗ್ ಕಾಲೇಜಿಗೆ ಉಚಿತ ಇಟ್ಟಿಗೆ,ಮರಳು ಹೊಡೆಸಿಕೊಂಡಿದ್ದಾರೆ ಹಲವು ಕ್ರಷರ್ ಗಳಿಂದ ಹಫ್ತಾ ವಸೂಲು ಮಾಡುತ್ತಿದ್ದರು,ಮರಳು ದಂಧೆ ನಡೆಸುತ್ತಿದ್ದರು ಎಂದು ನಾನು ಕೇಳಿದ್ದೇನೆ. ನನ್ನ ವಿರುದ್ಧ ಮಾತನಾಡಿದರೆ ನಾನೂ ಮಾತನಾಡುತ್ತೇನೆ. ಅವರು ನಾಲಿಗೆ ಬಿಗಿಹಿಡಿದು ಮಾತನಾಡಬೇಕು ಗೌರಿಶಂಕರ್ ಗೆ ಇದೇ ಕಡೆಯ ಎಚ್ಚರಿಕೆ ಎಂದು ಹೇಳಿದರು.

ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡುವುದರಲ್ಲಿ ಗೌರಿಶಂಕರ್ ನಿಸ್ಸಿಮರು. ಅವರು ಮೂರೂ ಪಕ್ಷಗಳನ್ನು ಕಂಡು ಬಂದಿದ್ದಾರೆ. ಇಂಥಹ ಹೊಂದಾಣಿಕೆ ರಾಜಕಾರಣಕ್ಕೆ ಡಾ.ಜಿ.ಪರಮೇಶ್ವರ್‌ರವರು ಗೌರಿಶಂಕರ್ ಅವರ ಜಗದ್ಗುರುಗಳು. ಡಾ||ಜಿ.ಪರಮೇಶ್ವರ್ ರವರು ಅವರ ಚೇಲಾಗಳನ್ನು ಬಿಟ್ಟು ಪತ್ರಿಕಾಗೋಷ್ಠಿ ನಡೆಸಿದ್ದಾರೆ,ಕಳೆದ ೨ ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿಗೆ ಪರಮೇಶ್ವರ್ ರವರ ಕೊಡುಗೆ ಶೂನ್ಯ,೨ವರ್ಷಗಳಿಂದ ಶಾಸಕರಿಗೆ ನಯಾಪೈಸೆ ಅನುದಾನ ನೀಡಿಲ್ಲ ಎತ್ತಿನಹೊಳೆಗೆ ನಯಾಪೈಸೆ ಅನುದಾನ ನೀಡಿಲ್ಲ,ಕುಣಿಗಲ್ ಶಾಸಕರಿಗೆ ಎಕ್ಸ್ ಪ್ರೆಸ್ ಕೆನಾಲ್ ಗೆ ನೂರಾರು ಕೋಟಿ ಅನುದಾನ ನೀಡಿದ್ದಾರೆ.
ಇಂತಹ ಸರ್ಕಾರ ಇದ್ದರೆಷ್ಟು ಹೋದರೆಷ್ಟು, ರಾಜ್ಯ ಸರ್ಕಾರ ಆರ್ಥಿಕವಾಗಿ ೩ರಿಂದ ೧೦ನೇ ಸ್ಥಾನಕ್ಕೆ ಹೋಗಿದೆ,ನಾನು ಪ್ರಯಾಗ್ ರಾಜ್‌ಗೆ ಹೋಗಿ ಪುಣ್ಯ ಸ್ನಾನ ಮಾಡಿದ್ದನ್ನೂ ಈ ಮಹನೀಯರು ಟೀಕಿಸಿದ್ದಾರೆ. ನಾನು ಪ್ರಯಾಗ್ ರಾಜ್‌ಗೂ ಹೋಗುತ್ತೇನೆ. ಓ.ನರಸೀಪುರಕ್ಕೂ ಹೋಗುತ್ತೇನೆ ನಾನು ಕಷ್ಟ ಪಟ್ಟು ದುಡಿದ ಪುಣ್ಯದ ಹಣದಲ್ಲಿ ಹೋಗಿದ್ದೇನೆ, ದೇವರು ಅಲ್ಲಿಗೆ ಹೋಗಿ ಬರುವಷ್ಟು ಸಂಪತ್ತನ್ನು ನನಗೆ ಕೊಟ್ಟಿದ್ದಾನೆ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷರಾದ ಖರ್ಗೆರವರು ಪ್ರಯಾಗ್ ರಾಜ್ ಗೆ ಹೋದರೆ ಪಾಪ ಹೋಗಿ ಪುಣ್ಯ ಬರುತ್ತದೆಯೇ ಎಂದು ಹಿಂದೂಗಳ ಮನಸ್ಸನ್ನು ನೋಯಿಸಿದ್ದರು,ಉಪಮುಖ್ಯಮಂತ್ರಿಗಳಾದ ಶಿವಕುಮಾರ್ ಮತ್ತು ಅವರ ಕುಟುಂಬ ವರ್ಗದವರು ಪ್ರಯಾಗ್ ರಾಜ್ ಗೆ ಹೋಗಿದ್ದರು ಅವರೂ ತಮ್ಮ ಪಾಪ ತೊಳೆದುಕೊಳ್ಳಲು ಅಲ್ಲಿಗೆ ಹೋಗಿದ್ದರೇ ಎಂದು ನಾನು ಕೇಳಲು ಆಗುತ್ತದೆಯೇ? ಆಗ ನನಗೂ ನಿಮಗೂ ಯಾವ ವ್ಯತ್ಯಾಸವೂ ಇರುವುದಿಲ್ಲ. ನಾನು ನಿಮ್ಮ ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಹೇಳಿದರು.
ಮುರಳೀಧರ ಹಾಲಪ್ಪರವರಿಗೆ ಪರಮೇಶ್ವರ್ ಅವರ ಹಿಂದೆ ಓಡಾಡುವುದರಲ್ಲಿಯೇ ರೋಮಾಂಚನ. ಅವರಿಗೆ ನಾನು ವಿಧಾನಸಭೆಯಲ್ಲಿ ತುಮಕೂರು ವಿಶ್ವವಿದ್ಯಾಲಯದ ಸೌಲಭ್ಯಗಳ ಬಗ್ಗೆ ಪ್ರಶ್ನೆ ಕೇಳಿರುವುದು ಗೊತ್ತಿಲ್ಲ,ಎತ್ತಿನಹೊಳೆ ನೀರಾವರಿ ಯೋಜನೆ ಬಗ್ಗೆ ಚರ್ಚೆ ಮಾಡಿರುವುದು, ದಲಿತ ಮಹಿಳೆಗೆ ಶವ ಸಂಸ್ಕಾರಕ್ಕೆ ಜಾಗ ಇಲ್ಲದೇ ಇರುವುದನ್ನು ಪ್ರಸ್ತಾಪ ಮಾಡಿರುವುದು ಗೊತ್ತಿಲ್ಲ.

ಇವು ಕೇವಲ ಮೂರು ಸ್ಯಾಂಪಲ್ ಕೊಟ್ಟಿರುವ, ಸದನದಲ್ಲಿ ನಾನು ಏನು ಕೇಳಿದೆ. ಏನು ಹೇಳಿದೆ ಎಂದೆಲ್ಲ ಬಂದು ಮುರಳೀಧರ ಹಾಲಪ್ಪ ಅವರಿಗೆ ಹೇಳಲು ಆಗುತ್ತದೆಯೇ? ಅವರು ಇನ್ನಾದರೂ ಪತ್ರಿಕೆಗಳನ್ನು ಓದಲು ಕಲಿಯಬೇಕು. ಅಥವಾ ವಿಧಾನಸಭೆಯ ಲೈಬ್ರರಿಗೆ ಹೋಗಿ ಅಲ್ಲಿ ಕಲಾಪಗಳಲ್ಲಿ ನಾನು ಏನು ಪ್ರಶ್ನೆ ಹಾಕಿದ್ದೇನೆ ಎಂದು ಓದಲಿ,ಅವರ ತಲೆ ಕೂದಲು ಬಿಳಿಯಾಗಿವೆ. ಆದರೆ, ಬುದ್ಧಿ ಬಲಿತಂತೆ ಕಾಣುವುದಿಲ್ಲ ಎಂದು ಟೀಕಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿಹೆಬ್ಬಾಕ, ವೈ.ಎಚ್.ಹುಚ್ಚಯ್ಯ, ಜಿಲ್ಲಾ ಬಿಜೆಪಿ ವಕ್ತಾರ ಟಿ.ಆರ್.ಸದಾಶಿವಯ್ಯ, ಮುಖಂಡರಾದ ಸದಾನಂದ, ಜಗದೀಶ್, ಸಿದ್ದೇಗೌಡ,ಪ್ರಭಾಕರ್ ಮತ್ತಿತರರು ಹಾಜರಿದ್ದರು.
- ಕೆ.ಬಿ.ಚಂದ್ರಚೂಡ