ಬೇಲೂರು– ತಾಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ದೊಡ್ಡಬ್ಯಾಡಗೆರೆ ಗ್ರಾಮಕ್ಕೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಿದ ಹಿನ್ನೆಲೆಯಲ್ಲಿ ಇಡೀ ಗ್ರಾಮಸ್ಥರು ಸಂತಸದಿಂದ ಸಾರಿಗೆ ಬಸ್ಸಿಗೆ ಪೂಜೆ ನಡೆಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಬಿ.ಎಂ ದೊಡ್ಡವೀರೇಗೌಡ ಹಾಗೂ ಬೇಲೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪರ್ವತಯ್ಯ ಸೇರಿದಂತೆ ಇನ್ನೂ ಮುಂತಾದ ಗಣ್ಯರು ಸಂಭ್ರಮಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿ ಬಿ.ಎಂ ದೊಡ್ಡವೀರೇಗೌಡ, ದೊಡ್ಡಬ್ಯಾಡಿಗೆರೆ ಗ್ರಾಮ ಹೆಬ್ಬಾಳು ಗ್ರಾಮ ಪಂಚಾಯಿತಿಗೆ ಸೇರುತ್ತದೆ. ಹೆಬ್ಬಾಳಿನಿಂದ ಸುಮಾರು ಮೂರು ಕಿಲೋಮೀಟರ್ ಹಾಗೂ ಮಲ್ಲನಹಳ್ಳಿ ಗಡಿಯಿಂದ ಸುಮಾರು ಎರಡು ಕಿಲೋ ಮೀಟರ್ ಗ್ರಾಮಕ್ಕೆ ಸಂಪರ್ಕ ಇರುವ ಕಾರಣದಿಂದ ಇಲ್ಲಿನ ಜನರಿಗೆ ಪ್ರಯಾಣಕ್ಕೆ ತೀವ್ರ ಕಷ್ಟವಾಗುತ್ತಿದೆ.
ವಿಶೇಷವಾಗಿ ಪ್ರತಿನಿತ್ಯ ವಿದ್ಯಾರ್ಥಿಗಳು ಖಾಸಗಿ ವಾಹನ ಇಲ್ಲವೇ ನಡಿಗೆಯ ಮೂಲಕವಾಗಿ ಶಾಲಾ-ಕಾಲೇಜುಗೆ ತೆರಳಬೇಕಾಗುತ್ತದೆ ಇಂತಹ ಸಂದರ್ಭ ಅರಿತು ಸದ್ಯ ಸಾರಿಗೆ ಇಲಾಖೆ ಗ್ರಾಮಸ್ಥರ ಕೋರಿಕೆಯ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಸ್ ಸೌಲಭ್ಯ ನೀಡಿದ್ದು ನಿಜಕ್ಕೂ ಸಂತೋಷವಾಗಿದೆ. ಗ್ರಾಮಸ್ಥರು ಹೆಚ್ಚು ಹೆಚ್ಚು ಸಾರಿಗೆ ಬಸ್ಸಿನಲ್ಲಿ ಪ್ರಯಾಣ ಮಾಡುವುದರ ಮೂಲಕವಾಗಿ ಬಸ್ ಇನ್ನೂ ಹೆಚ್ಚಿನ ಸಂಚಾರಕ್ಕೆ ಬೆಂಬಲವನ್ನು ನೀಡಬೇಕಿದೆ ಅಲ್ಲದೆ ಸಾರಿಗೆ ಅಧಿಕಾರಿಗಳು ಕೂಡ ವ್ಯವಸ್ಥಿತವಾಗಿ ಸೌಲಭ್ಯ ಕಲ್ಪಿಸಬೇಕು ಹಾಗೆಯೇ ಮಾನ್ಯ ಶಾಸಕರು ಮಲ್ಲನಹಳ್ಳಿ ಹೆಬ್ಬಾಳು ರಸ್ತೆಯ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು.

ಬೇಲೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪರ್ವತಯ್ಯ ಮಾತನಾಡಿ, ಈ ಹಿಂದೆ ಕೂಡ ದೊಡ್ಡಬ್ಯಾಡಿಗೆರೆ ಗ್ರಾಮಕ್ಕೆ ಬಸ್ ಸೌಲಭ್ಯ ನೀಡಿತ್ತು ಆದರೆ ಪ್ರಯಾಣಿಕರ ಅಭಾವದಿಂದ ಬಸ್ ಸ್ಥಗಿತವಾಗಿತ್ತು ಈ ಬಗ್ಗೆ ಮಾನ್ಯ ಶಾಸಕರಾದಂತಹ ಹೆಚ್.ಕೆ. ಸುರೇಶ್ ಅವರಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರು ಗ್ರಾಮಕ್ಕೆ ಬಸ್ ಸೌಲಭ್ಯ ನೀಡಿದ್ದಾರೆ.
ಸದ್ಯ ಬೇಲೂರು ಮಲ್ಲನಳ್ಳಿಗೆರೆ ಬಸ್ ಸೌಲಭ್ಯವಿದ್ದು ಮುಂದಿನ ದಿನಗಳಲ್ಲಿ ಪ್ರಯಾಣಿಕರ ಕೊರತೆ ಆಗದಂತೆ ಮಲ್ಲನಹಳ್ಳಿ ದೊಡ್ಡಬ್ಯಾಡಗೆರೆ ಹೆಬ್ಬಾಳು ಮೂಲಕವಾಗಿ ಬೇಲೂರಿಗೆ ಸಂಚಾರವನ್ನು ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ಅಧಿಕಾರಿಗಳು ಮುಂದಾಗಬೇಕು ಆಗ ಶಾಶ್ವತವಾಗಿ ಸಂಚಾರವನ್ನು ಉಳಿಸಿಕೊಳ್ಳಬಹುದು.

ಈ ನಿಟ್ಟಿನಲ್ಲಿ ಗ್ರಾಮಸ್ಥರು ಖಾಸಗಿ ವಾಹನಗಳಿಗಿಂತ ಹೆಚ್ಚು ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಮಾಡಬೇಕಿದೆ ಇತ್ತೀಚೆಗೆ ರಾಜ್ಯ ಸರ್ಕಾರ ಮಹಿಳೆಯರಿಗೆ ಶಕ್ತಿ ಯೋಜನೆಯ ಮೂಲಕವಾಗಿ ಉಚಿತ ಪ್ರಯಾಣವನ್ನು ನೀಡಿದ ಕಾರಣ ಈ ಸೌಲಭ್ಯದ ಸದ್ಬಳಕೆಯನ್ನು ಮಾಡಿಕೊಳ್ಳಬೇಕು. ಅಲ್ಲದೆ ಮಲ್ಲನಹಳ್ಳಿ ಹೆಬ್ಬಾಳು ಸುಮಾರು 3 km ರಸ್ತೆ ಈಗಾಗಲೇ ಟೆಂಡರ್ ಹಂತಕ್ಕೆ ಬಂದಿದ್ದು ಶೀಘ್ರವೇ ಕಾಮಗಾರಿ ನಡೆಸುವ ಭರವಸೆಯನ್ನು ಬೇಲೂರು ಶಾಸಕರು ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಲ್ಲಿಕಾರ್ಜುನ್. ರಾಜಣ್ಣ, ಚಂದ್ರೇಗೌಡ, ಪುನೀತ್, ನಟರಾಜ್, ಸೋಮಶೇಖರ, ಗಂಗಾಧರಪ್ಪ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.