ಚಿಕ್ಕಮಗಳೂರು: ಐದು ದಶಕಗಳಿಗೂ ಹೆಚ್ಚು ಕಾಲ ಕಾಫಿ ತೋಟಗಳ ನಿರ್ವಹಣೆಯಲ್ಲಿ ದೊಡ್ಡ ಸಾಧನೆ ಮಾಡುವ ಮೂಲಕ ಕಾಫಿ ನಾಡಿನಲ್ಲಿ ಹೆಸರು ಮಾಡಿದ್ದ ಕಾಫಿ ತೋಟಗಳ ನಿರ್ವಹಣೆಯ ತಜ್ಞರೆಂದೇ ಹೆಸರಾಗಿದ್ದ ಜಾನ್ ವಿಕ್ಟರ್ ಬ್ಯಾಪ್ಟಿಸ್ಟ್ (೯೬) ಶುಕ್ರವಾರ ವಯೋ ಸಹಜವಾಗಿ ಕೊನೆಯುಸಿರೆಳೆದಿದ್ದಾರೆ.
ಪತ್ನಿ ಐರಿನ್ ಬ್ಯಾಪ್ಟಿಸ್ಟ್, ಮಳೆ ನೀರು ಕೊಯ್ಲು ತಜ್ಞ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್, ವಾಟರ್ ಜೆಟ್ ಎಂಜಿನಿರ‍್ಸ್ನ ಸುನಿಲ್ ಗಿಲ್ಬರ್ಟ್ ಬ್ಯಾಪ್ಟಿಸ್ಟ್ ಸೇರಿದಂತೆ ಐವರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು, ಮರಿ ಮಕ್ಕಳು ಮತ್ತು ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.
ಜಾನ್ ವಿಕ್ಟರ್ ಬ್ಯಾಪ್ಟಿಸ್ಟ್ ಅವರು ಹೆಚ್ಚಿನ ಕಾಫಿ ತೋಟಗಳ ಮಾಲಿಕರ ಪ್ರೀತಿಯನ್ನು ಗಳಿಸಿದ್ದರು. ಮಳೆ ನೀರು ಕೊಯ್ಲು ತಂತ್ರಜ್ಞಾನದ ಹಿಂದಿನ ಸ್ಪೂರ್ತಿ ಅವರಾಗಿದ್ದರು. ಮಳೆ ನೀರು ಕೊಯ್ಲು ತಂತ್ರಜ್ಞಾನವನ್ನು ದೇಶಕ್ಕೆ ಪರಿಚಯಿಸಿರುವ ಹೆಸರಾಂತ ರೈನ್ ವಾಟರ್ ಹಾರ್ವೆಸ್ಟಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್ ಅವರ ತಂದೆಯಾಗಿರುವ ಜಾನ್ ವಿಕ್ಟರ್ ಬ್ಯಾಪ್ಟಿಸ್ಟ್ ಅವರು ಜಿಲ್ಲೆಯಲ್ಲಿ ಜೆವಿ ಬ್ಯಾಪ್ಟಿಸ್ಟ್ ಎಂದೇ ಹೆಸರುವಾಸಿಯಾಗಿದ್ದರು.

ಕದ್ರಿಮಿದ್ರಿಯ ವಿಂಟೇಜ್ ಹೋಂ ಸ್ಟೇನಲ್ಲಿ ಶನಿವಾರ ಮಧ್ಯಾಹ್ನ 1.30 ಗಂಟೆಯಿಂದ 2-30ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮಧ್ಯಾಹ್ನ4 ಗಂಟೆಗೆ ಚಿಕ್ಕಮಗಳೂರು ನಗರದ ಸಂತ ಜೊಸೆಫರ ಪ್ರಧಾನ ದೇವಾಲಯದಲ್ಲಿ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಆನಂತರ ಜಿಲ್ಲಾ ಆಟದ ಮೈದಾನದ ಹಿಂಭಾಗದಲ್ಲಿರುವ ಕ್ರೈಸ್ತರ ಸ್ಮಶಾದನದಲ್ಲಿ ಶವಸಂಸ್ಕಾರ ನಡೆಯಲಿದೆ.
ಅವರ ನಿಧನಕ್ಕೆ ಮಾಜಿ ಸಚಿವ ವಿಧಾನ ಪರಿಷತ್ ಶಾಸಕ ಡಾ.ಸಿ.ಟಿ.ರವಿ, ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಶಾಸಕ ಎಸ್.ಎಲ್.ಬೋಜೇಗೌಡ, ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಹಳಸೆ ಶಿವಣ್ಣ, ಅನಿವಾಸಿ ಭಾರತೀಯ ಡಾ.ರೊಮಾಲ್ಡ್ ಕೊಲಾಸೋ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.