ತುಮಕೂರು-ಸಿದ್ದಾರ್ಥ-ದಂತ-ಕಾಲೇಜಿನಲ್ಲಿ-‘ಕೃತಕ ಹಲ್ಲುಗಳ- ಜೋಡಣೆ-ಮತ್ತು-ರಕ್ಷಣೆ-ಕುರಿತ’-ಕಾರ್ಯಾಗಾರ

ತುಮಕೂರು: ನಗರದ ಸಮೀಪದ ಅಗಳಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ದಂತ ಕಾಲೇಜಿನ ಪ್ರೊಸ್ತೋಡಾಂಟಿಕ್ಸ್ ಮತ್ತು ಕ್ರೌನ್ & ಬ್ರಿಡ್ಜ್ ವಿಭಾಗ ಹಾಗೂ ಭಾರತೀಯ ಪ್ರಾಸ್ತೋಡಾಂಟಿಕ್ ಸೊಸೈಟಿಯ ಸಹಯೋಗದೊಂದಿಗೆ ಪ್ರೊಸ್ತೋಡಾಂಟಿಕ್ಸ್ ದಿನಾಚರಣೆಯ ಅಂಗವಾಗಿ ‘ಕೃತಕ ಹಲ್ಲುಗಳ ಜೋಡಣೆ ಮತ್ತು ಮುಖ ಸೌಂದರ್ಯದ ಪುನರ್ ಸ್ಥಾಪನೆ ಕುರಿತ’ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಲಾಯಿತು.


ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಾಗಾರವನ್ನು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಅವರು ಉದ್ಘಾಟಿಸಿ, ಮುಖ ಸೌಂದರ್ಯದ ಪುನರ್ ಸ್ಥಾಪನೆ ಮತ್ತು ಹಲ್ಲುಗಳ ಬದಲಿ ಜೋಡಣೆಯಲ್ಲಿ ದಂತ ವೈದ್ಯರ ಪಾತ್ರ ಮುಖ್ಯವಾಗಿರುತ್ತದೆ. ಅವರು ಪರಿಣಿತಿಯಿಂದಾಗಿ ವಿಪತ್ತುಗಳಂದ ಹಾನಿಗೊಳಗಾದ ಹಲ್ಲುಗಳ ಬದಲಿಗೆ ಕೃತಕ ಹಲ್ಲುಗಳನ್ನು ಜೋಡಿಸಿ, ನಿರ್ವಹಿಸಲು ಮತ್ತು ದಂತ ಹದಗೆಡುವುದನ್ನು ತಡೆಯಲು ಆಧುನಿಕ ಚಿಕಿತ್ಸಾ ಕ್ರಮಗಳನ್ನು ಅನುಸರಿಸಿ ಚಿಕಿತ್ಸೆ ನೀಡುತ್ತಾರೆ ಎಂದರು.


ಕಾರ್ಯಾಗಾರದಲ್ಲಿ ಪ್ರಾಸ್ತವಿಕ ನುಡಿಗಳನ್ನಾಡಿದ ಶ್ರೀ ಸಿದ್ದಾರ್ಥ ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಕುಡುವಾ, ದಂತ ಸಂರಕ್ಷಣೆಯಿಂದ ಮುಖ ಸೌಂದರ್ಯ ಕಾಪಾಡಿಕೊಳ್ಳಲು ಸಾಧ್ಯ. ಒಂದು ವೇಳೆ ದುರಂತ ಮತ್ತು ಇನ್ನಿತರ ಅವಗಡಗಳಲ್ಲಿ ದಂತಗಳು ಹಾನಿಗೀಡಾದಾಗ, ಆಧುನಿಕ ಚಿಕಿತ್ಸಾ ಕ್ರಮಗಳನ್ನು ಮತ್ತು ಪದ್ದತಿಗಳನ್ನು ಅಳವಡಿಸಿಕೊಂಡು ಕೃತಕ ಹಲ್ಲುಗಳನ್ನು ಜೋಡಿಸಿ, ಪೂರ್ಣಮಟ್ಟದಲ್ಲಿ ಪೂರ್ಣಬಾಯಿ ಪುನರ್ವಸತಿ ಮಾಡುವ ನಿಟ್ಟಿನಲ್ಲಿ ತಜ್ಞ ದಂತ ವೈದ್ಯರ ಪಾತ್ರ ಹೇಗಿರುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.


ಡೆಂಟಲ್ ಶಿಕ್ಷಣದ ನಿರಂತರ ಅಧ್ಯಯನದ ಭಾಗವಾದ ಈ ಎರಡು ದಿನದ ಕಾರ್ಯಾಗಾರದಲ್ಲಿ ದಂತವೈದ್ಯರು ಹಾಗೂ ಭಾರತೀಯ ಪ್ರಾಸ್ತೋಡಾಂಟಿಕ್ ಸೊಸೈಟಿಯ ಕರ್ನಾಟಕ ಶಾಖೆಯ ಅಧ್ಯಕ್ಷರು ಆದ ಡಾ.ಸುಪ್ರಿಯಾ ಮಾನ್ವಿ ಅವರು ‘ದಂತದ ನಗುವನ್ನು ಮರುಸ್ಥಾಪಿಸುವುದು-ಪ್ರೊಸ್ತೋಡಾಂಟಿಕ್ಸ್ ಪರಿಹಾರಗಳು’ ವಿಷಯ ಕುರಿತು ಮಾತನಾಡಿ, ದೀರ್ಘಕಾಲದ ಉರಿಯೂತದ ಪ್ರಮಾಣಿತ ಚಿಕಿತ್ಸಾ ಆಯ್ಕೆಗಳು, ಹಾನಿಗೊಳಗಾದ ದಂತದ ಭಾಗಗಳನ್ನು ಪುನಃಸ್ಥಾಪಿಸಲು ಅಳವಡಿಸಿಕೊಳ್ಳಬೆಕಾದ ಶಸ್ತ್ರಚಿಕಿತ್ಸೆ ಮತ್ತು ಕಸಿ ಮಾಡುವಿಕೆಯಂತಹ ಶಸ್ತ್ರಚಿಕಿತ್ಸೆ ಕುರಿತು ಮಾಹಿತಿ ನೀಡಿದರು.


ಭಾರತೀಯ ಪ್ರಾಸ್ತೋಡಾಂಟಿಕ್ ಸೊಸೈಟಿಯ ಕರ್ನಾಟಕ ಶಾಖೆಯ ಖಜಾಂಚಿ ಹಾಗೂ ದಂತ ತಜ್ಞೆಯಾದ ಡಾ.ಯಾಮಿನಿ ನಂದಿನಿ ಅವರು, ‘ದಂತಗಳ ಪುನರ್ ನಿರ್ಮಾಣ ಮತ್ತು ಮ್ಯಾಕ್ಸಿಲೊಫೇಶಿಯಲ್ ತೊಂದರೆಗಳಿಗೆ ಚಿಕಿತ್ಸೆ ಪರಿಹಾರಗಳು’ ಎಂಬ ವಿಷಯ ಕುರಿತು ಮಾತನಾಡಿ,ಪೆರಿಯೊಡಾಂಟಿಸ್ಟ್ಗಳು ಮತ್ತು ದಂತವೈದ್ಯರು ಆಸ್ಪತ್ರೆಗಳಲ್ಲಿ ದೀರ್ಘಕಾಲದ ದಂತದ ಉರಿಯೂತವನ್ನು ನಿರ್ವಹಿಸಲು ಮತ್ತು ಮೌಖಿಕ ಆರೋಗ್ಯವನ್ನು ಪುನಃಸ್ಥಾಪಿಸಲು, ಒಸಡು ಶಸ್ತ್ರಚಿಕಿತ್ಸೆ ಮತ್ತು ಹಲ್ಲುಗಳ ಆರೈಕೆಯನ್ನು ಹೇಗೆ ಮಾಡಬೇಕೆಂಬ ಮಾಹಿತಿ ನೀಡಿದರಲ್ಲದೆ, ಇಂದಿನ ಆಹಾರ ಪದ್ದತಿಯ ಅಳವಡಿಕೆಯಿಂದಾಗುತ್ತಿರುವ ದಂತ ರೋಗಗಳ ನಿರ್ಮೂನೆಯಲ್ಲಿ ದಂತತಜ್ಞರ ಪಾತ್ರ ಕುರಿತು ವಿವರಿಸಿದರು.


ಕಾರ್ಯಾಗಾರದ ಆಯೋಜಕರು ಹಾಗೂ ಶ್ರೀ ಸಿದ್ಧಾರ್ಥ ದಂತ ಕಾಲೇಜಿನ ಪ್ರೊಸ್ತೋಡಾಂಟಿಕ್ಸ್ ಮತ್ತು ಕ್ರೌನ್ & ಬ್ರಿಡ್ಜ್ ವಿಭಾಗದ ಮುಖ್ಯಸ್ಥರಾದ ಡಾ.ಎಸ್. ಪದ್ಮಜಾ, ರಿಜಿಸ್ಟಾçರ್ ಡಾ.ಎಂ.ಝಡ್. ಕುರಿಯನ್, ಪರೀಕ್ಷಾ ನಿಯಂತ್ರಕ ಡಾ.ಗುರುಶಂಕರ್, ಡಾ. ಶ್ರೀನಿವಾಸ್, ಡಾ. ರಮೇಶ್ ಚೌಧರಿ, ಡಾ. ರಾಘವೇಂದ್ರ, ಡಾ.ಚೇತನ, ಡಾ.ನೀಲಾಂಜಲಿ, ಡಾ. ಶರಣ್ ಅವರು ಹಾಜರಿದ್ದರು.


ದಂತ ವಿದ್ಯಾರ್ಥಿಗಳು ಮತ್ತು ಇಂಟರ್ನಿಗಳಿಗಾಗಿ ಹಮ್ಮಿಕೊಂಡಿದ್ದ ಈ ಕಾರ್ಯಾಗಾರದಲ್ಲಿ ಬೆಂಗಳೂರು ದಂತ ಮಹಾವಿದ್ಯಾಲಯ, ಕೆಎಲ್‌ಇ ಡಾ.ಅಂಬೇಡ್ಕರ್, ಆಕ್ಸ್ಫರ್ಡ್, ದಯಾನಂದ್ ಸಾಗರ್ ರಾಜೀವ್ ಗಾಂಧಿ ದಂತ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

× How can I help you?