ಕೆ.ಆರ್.ಪೇಟೆ: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಣೆ ಮಾಡಬೇಕು. ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರು ಮಾಸಿಕ ಸಭೆಯಲ್ಲಿ ಚರ್ಚಿಸುವ ಸಮಸ್ಯೆಗಳನ್ನು ಮುಂದಿನ ಸಭೆಯೊಳಗೆ ಬಗೆಹರಿಸಿ ವರದಿ ನೀಡಬೇಕು ಎಂದು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ ಇವುಗಳ ಅನುಷ್ಠಾನದಲ್ಲಿ ಯಾವುದಾದರೂ ಲೋಪವಿದ್ದಲ್ಲಿ ಅದನ್ನು ಕೂಡಲೇ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಬಗೆಹರಿಸಬೇಕು. ಪ್ರಮುಖವಾಗಿ ಹಲವು ಫಲಾನುಭವಿಗಳು ಪೋನ್ ಕರೆ ಮಾಡಿ, ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಮಾಸಿಕ 2ಸಾವಿರ ರೂ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ಬ್ಯಾಂಕುಗಳಲ್ಲಿ ಆಧಾರ್ ಲಿಂಕ್, ಪಾನ್ ಕಾರ್ಡ್ ಲಿಂಕ್ ಸರಿಯಾಗಿ ಆಗದೇ ಇರುವುದರಿಂದ ಡಿಬಿಟಿ ಮೂಲಕ ಗೃಹಲಕ್ಷ್ಮೀ ಹಣ ಜಮಾ ಆಗುತ್ತಿಲ್ಲ. ಇದನ್ನು ಸರಿಪಡಿಸಲು ಮುಂದಾಗಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸಲಹೆ ನೀಡಿದರು.

ಈ ಹಿಂದೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಾಗದೇ ಇರುವ ಅರ್ಹರು ತಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ರೇಷನ್ಕಾರ್ಡ್, ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸುವಂತೆ ಎ.ಬಿ.ಕುಮಾರ್ ಮನವಿ ಮಾಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಲ್ಲಿ ಪ್ರಮುಖವಾಗಿ ವಿದ್ಯುತ್ ಸಮಸ್ಯೆ, ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಮಸ್ಯೆ, ಸಾರಿಗೆ ಸಮಸ್ಯೆ, ಪಡಿತರ ಚೀಟಿ ಸಮಸ್ಯೆ, ಯುವನಿಧಿ ಅನುಷ್ಠಾನದಲ್ಲಿನ ಸಮಸ್ಯೆ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.
ತಾಲ್ಲೂಕಿನಲ್ಲಿ 627 ಯುವ ನಿಧಿ ಫಲಾನಭವಿಗಳಿದ್ದಾರೆ. ಗೃಹಜ್ಯೋತಿಯಲ್ಲಿ 66,959ಮಂದಿ ಫಲಾನಭವಿಗಳಿದ್ದಾರೆ. ಅನ್ನಭಾಗ್ಯ ಯೋಜನೆಯಲ್ಲಿ ಬಿ.ಪಿ.ಎಲ್. ಕಾರ್ಡಿನ 62,523ಮಂದಿಗೆ ಹಾಗೂ 4,106ಅಂತ್ಯೋದಯ ಪಡಿತರ ಚೀಟಿದಾರರಿಗೆ ಡಿಬಿಟಿ ಮೂಲಕ ಅನ್ನಭಾಗ್ಯದ ಹಣ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ತಾಲ್ಲೂಕಿನಲ್ಲಿ ಅರ್ಹ ಫಲಾನುಭವಿಗಳ ಸಂಖ್ಯೆ 70,041 ಇರುತ್ತದೆ. ಧನ ಸಹಾಯ ಪಡೆಯುತ್ತಿರುವವರು 67,853 ಆಗಿರುತ್ತದೆ. ಶೇ.99.28ರಷ್ಟು ಸಾಧನೆ ಮಾಡಲಾಗಿದೆ ಎಂದು ಆಯಾ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಾರ್ಯದರ್ಶಿ ತಾ.ಪಂ.ಇಓ ಕೆ.ಸುಷ್ಮ, ಆಹಾರ ಇಲಾಖೆಯ ಶಿರಸ್ತೇದಾರ್ ಪೂರ್ಣಿಮ, ಚೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಓ ಅಕ್ಕಮಹಾದೇವಿ, ಆಹಾರ ಇಲಾಖೆಯ ವಿನೋದ್, ಬಸ್ ಡಿಪೋ ಮ್ಯಾನೇಜರ್ ರವಿಕುಮಾರ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರುಗಳಾದ ಬೂಕನಕೆರೆ ಬಿ.ವಿ.ರೂಪಾ, ಸಿಂಧುಘಟ್ಟ ಹಾಫೀಜ್ ಉಲ್ಲಾ, ಗೋವಿಂದನಹಳ್ಳಿಕೊಪ್ಪಲು ಶ್ಯಾಮಣ್ಣ, ಬೊಮ್ಮೇನಹಳ್ಳಿ ಲತಾ, ಕನಕದಾಸನಗರದ ಶಿವಮ್ಮ, ಸಿಂಗನಹಳ್ಳಿ ಗೋಪಾಲ್, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಯಗಚಗುಪ್ಪೆ ಶಿವಲಿಂಗಪ್ಪ, ಬಂಡಿಹೊಳೆ ಉಮೇಶ್, ಡಿ.ಎನ್.ಸೋಮಶೇಖರ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವಿಷಯ ನಿರ್ವಾಹಕಿ ಚೈತ್ರಾ ಸೇರಿದಂತೆ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
- ಶ್ರೀನಿವಾಸ
.