ಚಿಕ್ಕಮಗಳೂರು-ದಸಂಸ ಅಂಬೇಡ್ಕರ್ ವಾದ ಸಂಘಟನೆಯ ಕೆಲ ಮುಖಂಡರಿಂದ ಶಾಲಾ ಆವರಣ ಅತಿಕ್ರಮ ಪ್ರವೇಶ ಮಾಡಿ ಪ್ರಾಂಶುಪಾಲರಿಗೆ ಮತ್ತ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದು ತಪ್ಪಿತಸ್ಥರ ವಿರುದ್ದ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ್ ಜನ ಸೇನೆ ಸಮಾಜ ಕಲ್ಯಾಣ ಅಧಿಕಾರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿತು.
ಮನವಿ ನೀಡಿ ಮಾತನಾಡಿದ ದಲಿತ್ ಜನ ಸೇನೆಯ ಜಿಲ್ಲಾಧ್ಯಕ್ಷ ಅನಿಲ್ ಆನಂದ್ ಅವರು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ಕೆಲ ಮುಖಂಡರು ಯಾವುದೇ ರೀತಿಯ ಪೂರ್ವಾನುಮತಿ ಪಡೆಯದೆ ಮೊರಾರ್ಜಿ ದೇಸಾಯಿ ಸರ್ಕಾರಿ ವಸತಿ ಶಾಲೆ ಆವರಣವನ್ನು ಪ್ರವೇಶಿಸಿ ಪ್ರಾಂಶುಪಾಲರನ್ನು ನಿಂದಿಸಿದ್ದಾರೆ. ಸಿಬ್ಬಂದಿಗಳಿಗೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದು ಕರ್ತವ್ಯ ನಿರತ ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡಿದ್ದನ್ನು ಆಕ್ಷೇಪಿಸಿ, ಅಲ್ಲಿನ ಶಾಲಾ ಶಿಕ್ಷಕರು ಸೇರಿದಂತೆ ಸಿಬ್ಬಂದಿಗಳು ದೂರು ನೀಡಲು ತೆರಳಿದಾಗ ಅವರ ಮೇಲೆ ಜಾತಿನಿಂದನೆ ಮಾಡಿದ್ದಾರೆಂದು ಆರೋಪಿಸಿ ದಸಂಸ ಅಂಬೇಡ್ಕರ್ ವಾದದ ಕೆಲ ಮುಖಂಡರು ಸುಳ್ಳು ಪ್ರತಿದೂರು ನೀಡಿ ಶಾಲೆಯ ವಾತಾವರಣವನ್ನು ಹಾಳುಮಾಡಲು ಯತ್ನಿಸಿದ್ದಾರೆ ಎಂದು ದೂರಿದರು.

ಒಬ್ಬ ದಲಿತ ಮಹಿಳೆಯ ಮೇಲೆಯೇ ಜಾತಿ ನಿಂದನೆ ದೂರಿನಡಿ ದಲಿತ ದೌರ್ಜನ್ಯ ಪ್ರಕರಣ ದಾಖಲು ಮಾಡಿರುವ ಅವರ ಮನಸ್ಥಿತಿ ಎಷ್ಟು ತಳಮಟ್ಟದಲ್ಲಿದೆ ಎಂಬುದು ಈ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತಿದ್ದು ಯಾವುದೇ ರೀತಿಯ ತೊಡಕು ಬಾರದಂತೆ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾ ಬಂದಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ತಮ್ಮ ವೈಯಕ್ತಿಕ ಕಾರಣಗಳಿಗೋಸ್ಕರ ಮಾಡಿ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕುಂಟಾಗಿರುವುದು ನಮ್ಮ ದಲಿತ ಜನ ಸೇನಾ ಖಂಡಿಸುತ್ತದೆ ಎಂದರು.
ಈ ಬಗ್ಗೆ ವಸತಿ ಶಾಲೆಯ ಮಕ್ಕಳ ಪೋಷಕರು ಪ್ರಾಂಶುಪಾಲರ ಪರವಾಗಿ ಪ್ರತಿಭಟನೆಯನ್ನು ನಡೆಸಿರುವುದು ಗಮನಿಸಬೇಕಾಗಿದ್ದು ಪ್ರಾಂಶುಪಾಲರ ಕಾರ್ಯವೈಖರಿಯನ್ನು ಗಮನಿಸಿ ಪೋಷಕರು ಪ್ರಾಂಶುಪಾಲ ಮಧುಸೂದನ್ ವರ್ಗಾವಣೆ ವಿರುದ್ಧ ಧ್ವನಿಯೆತ್ತಿ ತಮ್ಮ ಆಕ್ರೋಶಗಳನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ ಆದರೆ ಕಾಣದ ಕೈಗಳ ಕೈವಾಡದಿಂದ ಪ್ರಾಂಶುಪಾಲರಾದ ಮಧುಸೂದನ್ ಹಾಗೂ ಸಿಬ್ಬಂದಿ ವಿದ್ಯಾ ಅವರನ್ನು ವರ್ಗಾವಣೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ದಲಿತ ಸಂಘಟನೆಯ ಕೆಲ ಮುಖಂಡರು ತಮ್ಮ ಬೇಡಿಕೆಗಳಿಗೆ ಶಿಕ್ಷಕರು ಸ್ಪಂದಿಸದಿದ್ದಾಗ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ದೂರು ನೀಡುತ್ತಾರೆ ಅದು ಫಲಕಾರಿಯಾಗದಿದ್ದರೆ ನೇರವಾಗಿ ಅವರ ಮೇಲೆ ಜಾತಿ ನಿಂದನೆಯ ಆರೋಪವರಿಸಿ ವಿನಾಕಾರಣ ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿಪಡಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.

ಇಂತಹ ಆತಂಕಕಾರಿ ವಾತಾವರಣದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳು ಈ ಕೆಲ ದಲಿತ ಸಂಘಟನೆಗಳ ಮುಖಂಡರಿAದ ಬೇಸತ್ತು ಹೋಗಿದ್ದು ಕೂಡಲೇ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಜಿಲ್ಲಾಡಳಿತ ಮುನ್ನಚ್ಚರಿಕೆ ವಹಿಸಿ ಆಗಿರುವ ತೊಡಕನ್ನು ಸರಿಪಡಿಸಬೇಕು ಎಂದು ಮನವಿ ಮಾಡಿರುವ ಅವರು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಹೀಳಾ ಘಟಕದ ಜಿಲ್ಲಾಧ್ಯಕ್ಷ ಸ್ವರ್ಣ ಗೌರಿ, ಮುಖಂಡರಾದ ಅರುಣ್, ನಾಗರಾಜ್, ತಿಲಕ್, ರೋಹಿತ್, ರಂಜಿತ್, ರಾಜಶೇಖರ್,ಹರೀಶ್, ತಾರಾನಾಥ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.