ಬಾಳೆಹೊನ್ನೂರು ; ಬಾಳೆಹೊನ್ನೂರು ಅರಣ್ಯ ಇಲಾಖೆಯಲ್ಲಿ ಅಂತ್ಯಸಂಸ್ಕಾರಕ್ಕೆ ಸೌದೆಯನ್ನು ದಾಸ್ತಾನು ಮಾಡಬೇಕೆಂದು ಬಳಕೆದಾರರ ವೇದಿಕೆ ಸಂಚಾಲಕ ಹಾಗೂ ಪತ್ರಕರ್ತ ಯಜ್ಞಪುರುಷ ಭಟ್ ಆಗ್ರಹಿಸಿದ್ದಾರೆ.
ಈ ಸಂಬಂಧ ಕೊಪ್ಪ ಡಿಎಫ್‌ಒ ಹಾಗೂ ಬಾಳೆಹೊನ್ನೂರಿನ ಎಸಿಎಫ್ ರವರಿಗೆ ಮನವಿ ಮಾಡಿ ಪಟ್ಟಣ ಸುತ್ತಮುತ್ತ ಯಾರಾದರು ಮೃತಪಟ್ಟಲ್ಲಿ ಅಂತ್ಯಸಂಸ್ಕಾರಕ್ಕಾಗಿ ಸೌದೆಗಾಗಿ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಕುಟುಂಬದವರು ದುಃಖ ಹಾಗೂ ಒತ್ತಡದ ಸಂದರ್ಭದಲ್ಲಿ ಸ್ನೇಹಿತರು ಕೆಲವು ಕಾಫಿ ತೋಟದ ಮಾಲೀಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸೌದೆ ಕೊಡುವಂತೆ ಒತ್ತಾಯಿಸುವುದು ಸರ್ವೇ ಸಾಮಾನ್ಯವಾಗಿದೆ.
ಇತ್ತೀಚೆಗೆ ಸೌದೆ ಬರುವುದು ತಡವಾಗಿ ಅಂತ್ಯಸಂಸ್ಕಾರ ಮಾಡಲು ಸಂಜೆವರೆಗು ಕಾಯಬೇಕಾಯಿತು. ಈ ನಿಟ್ಟಿನಲ್ಲಿ ಪಟ್ಟಣದ ಅರಣ್ಯ ಇಲಾಖೆ ಆವರಣದಲ್ಲಿ ತುರ್ತಾಗಿ ಕನಿಷ್ಠ 10 ಟನ್ ಸೌದೆ ಅಂತ್ಯಸಂಸ್ಕಾರಕ್ಕಾಗಿ ಮೀಸಲಿಡಬೇಕೆಂದು ಮನವಿ ಮಾಡಲಾಗಿದೆ. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಶೀಘ್ರದಲ್ಲೆ ಕ್ರಮಕೈಗೊಳ್ಳುವುದಾಗಿ ಪತ್ರಕರ್ತರಿಗೆ ತಿಳಿಸಿದ್ದಾರೆ.