ತುಮಕೂರು : ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸರ್ಕಾರ ಪ್ರಸ್ತಾಪಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ತೀವ್ರವಾಗಿ ಖಂಡಿಸುತ್ತದೆ, ಏಕೆಂದರೆ ಇದು ಅಸಾಂವಿಧಾನಿಕ ಹಾಗೂ ಮುಸ್ಲಿಂ ಸಮುದಾಯದ ಹಕ್ಕುಗಳ ಮೇಲೆ ನೇರ ದಾಳಿ ಆಗಿದೆ. ಈ ಮಸೂದೆ, ಶತಮಾನಗಳ ಕಾಲ ಸಮುದಾಯದ ಕಲ್ಯಾಣಕ್ಕಾಗಿ ರಕ್ಷಿಸಲಾಗಿದ್ದ ವಕ್ಫ್ ಆಸ್ತಿಗಳ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದು ಜಿಲ್ಲಾಧ್ಯಕ್ಷ ಷಫೀವುಲ್ಲಾ ಖಾನ್ ಹೇಳಿದರು.
ನಗರದ ಬಿ.ಜಿ.ಎಸ್.ವೃತ್ತದಲ್ಲಿ ಇಂದು ಎಸ್.ಡಿ.ಪಿ.ಐ. ವತಿಯಿಂದ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್.ಡಿ.ಪಿ.ಐ. ಕರ್ನಾಟಕ ಘಟಕ, ಕರ್ನಾಟಕದ ಜನತೆಗೆ ಕರೆ ನೀಡುತ್ತಿದ್ದು, ಮತಾಂಧ ಮತ್ತು ದಬ್ಬಾಳಿಕೆ ಹಂಚುವ ಈ ಮಸೂದೆಯನ್ನು ತಿರಸ್ಕರಿಸಲು ಒಗ್ಗೂಡಲು ಮನವಿ ಮಾಡುತ್ತಿದೆ. ಸರ್ಕಾರದ ಈ ಪ್ರಕಾರದ ಕ್ರಮವು ಮತ ಸ್ವಾತಂತ್ರ‍್ಯ ಮತ್ತು ಸಾಮಾಜಿಕ ನ್ಯಾಯದ ವಿರುದ್ಧದ ದಾಳಿಯಾಗಿದೆ.

ನಾವು ಎಲ್ಲಾ ಪ್ರಜಾಸತ್ತಾತ್ಮಕ ಹಾಗೂ ಧರ್ಮನಿರಪೇಕ್ಷ ಶಕ್ತಿಗಳನ್ನು ಈ ಮಸೂದೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಭಾಗವಹಿಸಲು ಆಹ್ವಾನಿಸುತ್ತೇವೆ. ಎಸ್.ಡಿ.ಪಿ.ಐ ತನ್ನ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಬದ್ಧತೆಯನ್ನು ಪುನಃ ದೃಢಪಡಿಸುತ್ತದೆ ಹಾಗೂ ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮೇಲಿನ ಯಾವುದೇ ಹಸ್ತಕ್ಷೇಪವನ್ನು ಅನುಮತಿಸುವುದಿಲ್ಲ ಎಂದರು.
ನಾವು ಎಲ್ಲಾ ನಾಗರಿಕರನ್ನು ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಹಾಗೂ ಸರ್ಕಾರಕ್ಕೆ ಸ್ಪಷ್ಟ ಸಂದೇಶವನ್ನು ಕಳಿಸಲು ಕೋರುತ್ತೇವೆ, ನಾವು ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸುತ್ತೇವೆ ಎಂದು ಒಕ್ಕರಲಿನಿಂದ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರು ಮತ್ತು ತುಮಕೂರು ನಗರ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.