ತುಮಕೂರು-ವಿಎಓಗಳ-ನ್ಯಾಯಯುತ-ಹೋರಾಟಕ್ಕೆ-ಶಾಸಕ- ಜಿ.ಬಿ.ಜ್ಯೋತಿಗಣೇಶ್ -ಬೆಂಬಲ-ಅಧಿವೇಶನದಲ್ಲಿ-ಚರ್ಚಿಸುವ-ಭರವಸೆ

ತುಮಕೂರು: ಕಳೆದ ಎಂಟು ದಿನಗಳಿಂದ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಅಡಳಿತ ಅಧಿಕಾರಿಗಳ ಸಂಘ, ಕೇಂದ್ರ ಸಮಿತಿಯ ನಿರ್ದೇಶಕನದ ಮೇರೆಗೆ ಮುಷ್ಕರ ಕೈಗೊಂಡಿದ್ದರೂ ಸರಕಾರ ಇದುವರೆಗೂ ನಮ್ಮ ಬೇಡಿಕೆಗಳ ಈಡೇರಿಸಲು ಗಮನಹರಿಸಿರುವುದಿಲ್ಲ ಎಂದು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಎಸ್.ದೇವರಾಜು ತಿಳಿಸಿದ್ದಾರೆ.


ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕಳೆದ ಎಂಟು ದಿನಗಳಲ್ಲಿ ಮೂಲಭೂತ ಸೌಕರ್ಯ,ಬಡ್ತಿ,ಅಂತರ ಜಿಲ್ಲಾ ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಸರಕಾರದ ಪ್ರತಿನಿಧಿಗಳಿಂದ ಇದುವರೆಗೂ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ.ಹಾಗಾಗಿ ಮುಷ್ಕರವನ್ನು ಮುಂದುವರೆಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ನಾವು ಸರಕಾರಕ್ಕೆ ಹೊರೆಯಾಗುವಂತಹ ಯಾವ ಬೇಡಿಕೆಗಳನ್ನು ಮುಂದಿಟ್ಟಿಲ್ಲ.ಬದಲಾಗಿ, ನಮ್ಮ ಮೇಲಿರುವ ಹೊರೆಯನ್ನು ಇಳಿಸಿ ಎಂದು ಕೇಳುತಿದ್ದೇವೆ ಎಂದರು.


ಸರಕಾರದ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು, ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಮಿತಿಯ ಸದಸ್ಯರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರೂ, ಬೇಡಿಕೆಗಳ ಈಡೇರಿಕೆಯ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ. ನಮಗೂ ಸಹ ಮುಷ್ಕರದ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಲು ಇಷ್ಟವಿಲ್ಲ.ಆದರೆ ನಮ್ಮ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗದೆ ಕೆಲಸ ಮಾಡುವುದು ಕಷ್ಟವಾಗಿದೆ.ಗ್ರಾಮ ಆಡಳಿತ ಆಧಿಕಾರಿಗಳ ಹುದ್ದೆಗೆ ಶ್ರೀಮಂತರು ಬರುವುದಿಲ್ಲ.

ಮನೆಯ ಸ್ಥಿತಿಗತಿ ನೋಡಿ, ಓದುವ ಹಂಬಲವಿದ್ದರೂ ಕೆಲಸ ಅನಿವಾರ್ಯವಾದ ಕಾರಣ ಬರುತ್ತೇವೆ. ನಮಗೂ ಮನೆ, ಕುಟುಂಬ, ಮಕ್ಕಳ ಶಿಕ್ಷಣ, ಮನೆ ಬಾಡಿಗೆ ಇಂತಹ ಅನೇಕ ಸಮಸ್ಯೆಗಳಿವೆ.ಹಾಗಾಗಿ ಸರಕಾರ ಕೂಡಲೇ ನಮ್ಮ ಬೇಡಿಕೆಗಳ ಕಡೆಗೆ ಗಮನಹರಿಸಿ, ಬಗೆಹರಿಸಲು ಪ್ರಯತ್ನಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ.


ವಿ.ಎ.ಓಗಳ ಸಂಘದ ತುಮಕೂರು ತಾಲೂಕು ಅಧ್ಯಕ್ಷ ಕಲ್ಲೇಶ್ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಅರಿವು ನಮಗೆ ಇದೆ.ಆದರೆ ನಮ್ಮ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ಅನಿವಾರ್ಯವಾಗಿದೆ.ನಮಗೂ ಕುಟುಂಬ, ಮಕ್ಕಳು ಇದ್ದಾರೆ. ಹಾಗಾಗಿ ಸರಕಾರ ನಮ್ಮ ನ್ಯಾಯಯುತ ಬೇಡಿಕೆಗಳತ್ತ ಗಮನಹರಿಸಬೇಕು ಎಂಬುದು ಸರಕಾರಕ್ಕೆ ವಿನಮ್ರ ಮನವಿಯಾಗಿದೆ ಎಂದರು.


ಮುಷ್ಕರದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ದೇವರಾಜು, ಚಂದ್ರಕಲ, ರವಿಕುಮಾರ್, ಅನಿಲ್ ಕ್ರಿಸ್ಟೋಪರ್, ಶ್ರೀನಿವಾಸ್, ಮಂಜುನಾಥ್, ಸೂರಜ್, ದಿವ್ಯ, ಸಹನ, ಬಿಂದ್ರುಶ್ರೀ ಮಂಜುನಾಥ್,ಶ್ರೀಮತಿ ಸುನಿತಾ,ಸೇರಿದಂತೆ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು.


ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದ ಸ್ಥಳಕ್ಕೆ ಶಾಸಕ ಜ್ಯೋತಿಗಣೇಶ್ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದ ಅವರು, ವಿಧಾನಸಭಾ ಅಧಿವೇಶನದ ವೇಳೆ ಗ್ರಾಮ ಆಡಳಿತಾಧಿಕಾರಿಗಳ ಸಮಸ್ಯೆ ಮತ್ತು ಬೇಡಿಕೆ ಕುರಿತು ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.

  • ಕೆ.ಬಿ. ಚಂದ್ರಚೂಡ

Leave a Reply

Your email address will not be published. Required fields are marked *

× How can I help you?