ತುಮಕೂರು: ಶಿಕ್ಷಣವೇ ಅಭಿವೃದ್ಧಿಯ ಸಾಧನ, ಸಿದ್ದಗಂಗೆಯ ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ದೂರದೃಷ್ಠಿತ್ವದಿಂದ ಜಿಲ್ಲೆಯಲ್ಲಿ ಪ್ರವರ್ಧಮಾನಕ್ಕೆ ಬಂದ ಶಿಕ್ಷಣ ಕೃಷಿ ಜಿಲ್ಲೆಯ ಅಭಿವೃದ್ಧಿಯ ಪಥವನ್ನೇ ಬದಲಾಯಿಸಿದ್ದು, ಮಹತ್ತರ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಇದರಲ್ಲಿ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕೆ.ಬಿ.ಜಯಣ್ಣನವರ ಅವರ ಕೊಡುಗೆಯು ಜಿಲ್ಲೆಗೆ ಸಾಕಷ್ಟಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದ ವಿದ್ಯಾವಾಹಿನಿ ಸಮೂಹ ಸಂಸ್ಥೆಯ ಆವರಣದಲ್ಲಿ ನಡೆದ ಸಂಸ್ಥೆಯ ಸಂಸ್ಥಾಪಕ ಕೆ.ಬಿ.ಜಯಣ್ಣ ಅವರ ಅಭಿನಂದನಾ ಸಮಾರಂಭ ಮತ್ತು ಶಿಕ್ಷಣ ಶ್ರೀನಿಧಿ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಿದ್ದಗಂಗಾ ವಿದ್ಯಾಸಂಸ್ಥೆಯಿAದ ಪ್ರಾರಂಭವಾದ ಶಿಕ್ಷಣ ಸಿದ್ದಾರ್ಥ, ಸರ್ವೋದಯ, ವಿದ್ಯಾವಾಹಿನಿ, ಶ್ರೀದೇವಿ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು ವಿಸ್ತರಿಸಿಕೊಂಡು ಬರುತ್ತಿದ್ದು, ಶಿಕ್ಷಣ ಪ್ರತೀ ಕ್ಷೇತ್ರದ ಅಭಿವೃದ್ಧಿ ಸಾಧನ.
ಸ್ವಾತಂತ್ರ‍್ಯ ಬಂದಾಗ ಶೇ.೩೦ರಷ್ಟು ಇದ್ದ ಸಾಕ್ಷರತೆ ಪ್ರಮಾಣ ಇಂದು ಶೇ.8೦ದಾಟಿದೆ. ಶ್ರೀ ಸಾಮಾನ್ಯರ ಮಕ್ಕಳು ಉನ್ನತ ಹುದ್ದೆ ಹಿಡಿಯುವಂತಾಗಲು ಶಿಕ್ಷಣ ಸಂಸ್ಥೆಗಳು ಕೊಟ್ಟ ಅಕ್ಷರದ ಅರಿವು ಕಾರಣ, ಸಾಮಾನ್ಯ ಗಣಿತ ಶಿಕ್ಷಕರಾಗಿದ್ದ ಜಯಣ್ಣ ಅವರಿಂದು ೬ ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯೆಯನ್ನು ಪಡೆಯುವಂತಹ ವಿದ್ಯಾ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವುದು ಸಾಮಾನ್ಯ ಸಂಗತಿಯಲ್ಲ ಅದೊಂದು ವಿಶೇಷ ಸಾಧನೆ ಎಂದು ತಿಳಿಸಿದರು.

ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಸಿದ್ಧಲಿಂಗಸ್ವಾಮೀಜಿಗಳು ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಪಡೆದ ಕೋಟ್ಯಾಂತರ ವಿದ್ಯಾರ್ಥಿಗಳ ಪೈಕೆ ಲೆಕ್ಕ ಎಲ್ಲದಷ್ಟು ಮಂದಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಮಾನ ಅಲಂಕರಿಸಿದ್ದಾರೆ. ಡಾ.ಶ್ರೀ ಶಿವಕುಮಾರಸ್ವಾಮೀಜಿಯವರನ್ನೇ ಪ್ರೇರಣೆಯಾಗಿಸಿಕೊಂಡು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಆ ಸಾಲಿನಲ್ಲಿ ಮಠದ ಶಿಕ್ಷಕರಾಗಿದ್ದ ಕೆ.ಬಿ.ಜಯಣ್ಣ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಿರುವುದು ಸ್ಫೂರ್ತಿದಾಯಕ, ವಿದ್ಯಾ ವಾಹಿನಿ ಶಿಕ್ಷಣ ಸಂಸ್ಥೆ ಇನ್ನು ಹೆಚ್ಚಿನ ಯಶಸ್ಸು ಕಾಣಲಿ, ದೇವರು ಜಯಣ್ಣ ಮತ್ತು ಅವರ ಸಾಧನೆಗೆ ಬೆನ್ನೆಲುಬಾಗಿ ನಿಂತ ಅವರ ಶ್ರೀಮತಿ ಇಬ್ಬರಿಗೂ ನೆಮ್ಮದಿಯ ಬದುಕನ್ನು ಕರುಣಿಸಲಿ. ಹಿಮಾಲಯದಷ್ಟು ತಾಳೆ ಜಯಣ್ಣ ಅವರಲ್ಲಿದೆ ಎಂದು ಕೆ.ಬಿ.ಜಯಣ್ಣನವರನ್ನು ಬಣ್ಣಿಸಿ ಅಶೀರ್ವದಿಸಿದರು.
ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ ಮೂಲತಃ ಕ್ಯಾತ್ಸಂದ್ರದವರಾದ ಕೆ.ಬಿ.ಜಯಣ್ಣ ಮತ್ತು ಅವರ ಕುಟುಂಬದೊಡನೆ ಅವರಿಗಿದ್ದ ಬಾಂಧವ್ಯವನ್ನು ಸ್ಮರಿಸಿ ಶುಭಹಾರೈಸಿದರು.
ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣನವರು ಮಾತನಾಡುತ್ತಾ ಶಿಕ್ಷಣ ಕ್ಷೇತ್ರ ವ್ಯಾಪಾರ ಕ್ಷೇತ್ರವಾಗುತ್ತಿರುವ ಇಂದಿಗೆ ಹೋಲಿಸಿದರೆ 50-60 ವರ್ಷಗಳ ಹಿಂದೆಯೇ ಜಿಲ್ಲೆಯಲ್ಲಿ ಸಿದ್ದಗಂಗೆಯ ಪೂಜ್ಯ ಡಾ.ಶಿವಕುಮಾರಸ್ವಾಮೀಜಿ, ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಡಾ.ಎಚ್.ಎಂ.ಗಂಗಾಧರಯ್ಯ ಅವರು ಗ್ರಾಮೀಣ ಮಕ್ಕಳನ್ನು ಅಕ್ಷರಸ್ಥರಾಗಿಸಬೇಕೆಂಬ ಧೈಯವನ್ನಿರಿಸಿಕೊಂಡು ಪ್ರಾರಂಭಿಸಿದ ಶಾಲೆಗಳು ನಾಡಿಗೆ ಮಾದರಿಯೆನಿಸಿವೆ.

ಶ್ರೀಗಳಿಂದಲೇ ಪ್ರೇರಣೆ ಪಡೆದು ಕೆ.ಬಿ.ಜಯಣ್ಣ ಅವರು ಗಣಿತ ಶಿಕ್ಷಕರಾಗಿ ಲೆಕ್ಕ ತಪ್ಪದಂತೆ ಇಂದು ದೊಡ್ಡ ಶಿಕ್ಷಣ ಸಂಸ್ಥೆಯನ್ನು ಕಟ್ಟಿರುವುದು ದೊಡ್ಡ ಸಾಧನೆಯಾಗಿದೆ. ಜಯಣ್ಣ ಅವರ ಬದುಕು ತೆರೆದ ಪುಸ್ತಕವಿದ್ದಂತೆ ಅವರ ಜೀವನ ಅನೇಕರಿಗೆ ಸ್ಫೂರ್ತಿ ನೀಡುವಂತಹುದ್ದಾಗಿದೆ. ಅಳಿಯ ಎನ್.ಬಿ.ಪ್ರದೀಪ್ ಕುಮಾರ್ ಮಾವನವರ ಮಾರ್ಗದರ್ಶನದಲ್ಲಿ ಶಿಕ್ಷಣ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುತ್ತಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಹೆದ್ದಾರಿಗೆ ಹೆಚ್ಚಿನ ಒತ್ತು ಸಿಕ್ಕಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಜಿ.ಎಸ್.ಬಸವರಾಜು, ಡಾ.ಎಂ.ಆರ್. ಹುಲಿನಾಯ್ಕರ್, ಎಚ್.ಎಸ್.ಶಿವಶಂಕರ್, ಶಾಸಕರಾದ ಎಚ್.ವಿ. ವೆಂಕಟೇಶ್, ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಗೌಡ, ಜಿ.ಸೀತಾರಾಂ, ಎಸ್.ನಾಗಣ್ಣ, ಚಿ.ನಿ.ಪುರುಷೋತ್ತಮ್, ಪೂರ್ಣಿಮಾಜಯಣ್ಣ, ವಿದ್ಯಾ ವಾಹಿನಿ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್,ವಿದ್ಯಾನಿಧಿ ಪ್ರಾಂಶುಪಾಲರಾದ ಪ್ರೊ.ಎಸ್.ಆರ್.ಸಿದ್ದೇಶ್ವರಸ್ವಾಮಿ, ಪ್ರಿಯಾಪ್ರದೀಪ್, ಡಾ.ಸಿ.ಸೋಮಶೇಖರ್ ಶಾಸಕ ಜಿ.ಬಿ.ಜ್ಯೋತಿಗಣೇಶ್ ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ