ಶ್ರವಣಬೆಳಗೊಳ: ಪತ್ರಿಕಾ ವಿತರಕರು ಸೂರ್ಯ ಉದಯಿಸುವ ಮುನ್ನವೇ ಪ್ರತಿನಿತ್ಯ ಕೆಲಸದಲ್ಲಿ ಶ್ರಮವಹಿಸಿ ದುಡಿಯುವ ಕಾಯಕಯೋಗಿಗಳಾಗಿದ್ದು, ಪತ್ರಿಕಾ ವಿತರಕರು ಸೂರ್ಯವಂಶದವರು ಎಂದು ಶ್ರೀಮಠದ ಪೀಠಾಧ್ಯಕ್ಷರಾಗಿರುವ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಶ್ಲಾಘಿಸಿದರು.
ಶ್ರೀಕ್ಷೇತ್ರ ಶ್ರವಣಬೆಳಗೊಳದ ಜೈನ ಮಠದಲ್ಲಿ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಸಮ್ಮೇಳದ ಲಾಂಛನ ಹಾಗೂ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಸೂರ್ಯ ಪ್ರತಿನಿತ್ಯ ಹುಟ್ಟುವ ಸಮಯದಲ್ಲೇ ಪತ್ರಿಕಾ ವಿತರಕರ ಕೆಲಸ ಪ್ರಾರಂಭಗೊಳ್ಳುತ್ತದೆ, ಸೂರ್ಯ ಹೇಗೆ ಪ್ರತಿನಿತ್ಯ ದಿನವನ್ನು ಪ್ರಾರಂಭಿಸಿ ಬೆಳಕನ್ನು ನೀಡುತ್ತಾನೋ ಹಾಗೆಯೇ ಪ್ರತಿ ದಿನದ ವಿಚಾರಗಳನ್ನು ವಿಶ್ವದಾದ್ಯಂತ ಜನರಿಗೆ ಮುಂಜಾನೆಯೇ ಮಾಹಿತಿ ತಿಳಿಸುವ ಶ್ರಮಿಕ ವರ್ಗದ ಜನರು ಪತ್ರಿಕಾ ವಿತರಕರು.
ಪ್ರಪಂಚ ಎಷ್ಟೇ ಮುಂದುವರೆದರೂ ಜಾಲತಾಣಗಳು, ಟಿವಿ, ಯೂಟೂಬ್ ಹೀಗೆ ಅನೇಕ ತಂತ್ರಜ್ಞಾನಗಳು ಬೆಳೆದರೂ ಕೂಡ ಪ್ರತಿನಿತ್ಯ ಜನರು ಕಾಫಿಜೊತೆಗೆ ದಿನಪತ್ರಿಕೆಗಳನ್ನು ಓದದೇ ಇದ್ದರೆ ಆದಿನ ಕಳೆಯುವುದೇ ಇಲ್ಲ. ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಮುಂಜಾನೆಯೇ ಮನೆ ಮನೆಗಳಿಗೆ ಸೈಕಲ್‌ನಲ್ಲಿ ಪತ್ರಿಕೆ ಹಾಕುವ ವಿತರಕರು ಜಿಲ್ಲೆಯಲ್ಲಿ ಒಟ್ಟುಗೂಡಿ ಕುಟುಂಬದವರ ಜೊತೆ ಒಂದು ದಿನ ಸಮ್ಮೇಳನದಲ್ಲಿ ಭಾಗಿಯಾಗಿ ವಿತರಕರ ಸ್ನೇಹಿತರ ಕುಶಲೋಪರಿಗಳನ್ನು ವಿಚಾರಿಸುವ ಒಂದು ವೇದಿಕೆಯಾಗಲಿದೆ.

ಈ ಹಿಂದೆ ಪೀಠಾಧ್ಯಕ್ಷರಾಗಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಪತ್ರಕರ್ತರ ಸಮ್ಮೇಳನ, ವಿದ್ವತ್ ಸಮ್ಮೇಳನ, ಯುವ ಸಮ್ಮೇಳನ ಹಾಗೂ ಮಹಿಳಾ ಸಮ್ಮೇಳನಗಳನ್ನು ನಡೆಸುವ ಮೂಲಕ ರಾಜ್ಯದಲ್ಲೇ ಮಾದರಿಯಾಗಿದ್ದವರು, ಪತ್ರಿಕಾ ವಿತರಕರಿಗೆ ಹಾಗೂ ಪತ್ರಕರ್ತರನ್ನು ಹೆಚ್ಚು ಗೌರವಿಸುತ್ತಿದ್ದ ಸಂತ ಯಾರಾದರೂ ಇದ್ದರೆ ಅದು ನಮ್ಮ ಚಾರುಶ್ರೀಗಳು ಎಂದು ಹೆಮ್ಮೆಯಿಂದ ಹೇಳಲು ಬಯಸುತ್ತೇವೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಬಾಲಕೃಷ್ಣ ಮಾತನಾಡಿ ಮಾ.2ರಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ವತಿಯಿಂದ ರಾಜ್ಯದಲ್ಲೇ ಪ್ರಪ್ರಥಮ ಪತ್ರಿಕಾ ವಿತರಕರ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ವಿಚಾರ ಅದರಲ್ಲೂ ವಿತರಕರ ಸಂಘದ ರಾಜ್ಯಾಧ್ಯಕ್ಷರಾದ ಕೆ.ಶಂಭುಲಿಂಗ ಅವರು ನಮ್ಮ ತಾಲ್ಲೂಕನ್ನು ಆಯ್ಕೆ ಮಾಡಿ ಶಾಸಕರ ಮೇಲೆ ಭರವಸೆಯನ್ನು ಇಟ್ಟು ಈ ಸಮ್ಮೇಳನವನ್ನು ಚನ್ನರಾಯಪಟ್ಟಣದಲ್ಲಿ ನಡೆಸಲು ಇಚ್ಚಿಸಿದ್ದು ರಾಜ್ಯಾದ್ಯಂತ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಗಮಿಸಲಿದ್ದು ಜಿಲ್ಲೆಯ ಎಲ್ಲಾ ತಾಲೂಕು ವಿತರಕರು ಸಮ್ಮೇಳನಕ್ಕೆ ಆಗಮಿಸಿ ನಮ್ಮ ತಾಲೂಕಿನ ಆತಿಥ್ಯವನ್ನು ಸ್ವೀಕರಿಸಿ ಎಂದು ತಿಳಿಸಿ ಸ್ವಾಮೀಜಿಗಳ ಆಶೀರ್ವಾದದಿಂದ ಇಂದು ಲಾಂಚನ ಬಿಡುಗಡೆಯಾಗಿದ್ದು ಲಾಂಚನದಲ್ಲಿ ಜಿಲ್ಲೆಯ ಐತಿಹಾಸಿದ ಸ್ಥಳಗಳಾದ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿ, ಬೇಲೂರು-ಹಳೆಬೀಡು, ಗೊರೂರು ಜಲಾಶಯ, ತೆಂಗು ಹಾಗೂ ಕೆಎಂಎಫ್ ಘಟಕವನ್ನು ಸಹ ಲಾಂಚನದಲ್ಲಿ ಅಳವಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷ ಕಿರಣ್, ತಾಲೂಕು ವಿತರಕರ ಒಕ್ಕೂಟದ ಕಾರ್ಯದರ್ಶಿ ಎ.ಎಂ.ಜಯರಾA, ಪತ್ರಕರ್ತ ನಂದನ್‌ಪುಟ್ಟಣ್ಣ, ನಾಗೇಂದ್ರ ರಾ.ಯ, ಐ.ಕೆ.ಮಂಜುನಾಥ್, ಹೊಳೇನರಸೀಪುರ ತಾಲೂಕು ಅಧ್ಯಕ್ಷ ಮೋಹನ್‌ಕುಮಾರ್, ಕಾರ್ಯದರ್ಶಿ ಬಿ.ಸುರೇಶ್, ವಿತರಕರಾದ ಕೃಷ್ಣಪ್ರಸಾದ್, ಸಿ.ವಿ.ಮಂಜುನಾಥ್, ಸಿ.ಎಸ್.ವೆಂಕಟೇಶ್, ಚಂದ್ರಶೇಖರ್, ದಿನೇಶ್, ರಂಗನಾಥ್, ವಿಶ್ವಾಸ್ ಮತ್ತಿತರಿದ್ದರು.