ಅರಕಲಗೂಡು: ಮಕ್ಕಳಲ್ಲಿ ಜ್ಞಾನಾರ್ಜನೆ ವೃದ್ಧಿಸಲು ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ಸಂತೆಮರೂರು ಗ್ರಾಪಂ ಸದಸ್ಯ ಸಂತೋಷ್ ಶಣವಿನಕುಪ್ಪೆ ಹೇಳಿದರು.
ತಾಲೂಕಿನ ಶಣವಿನಕುಪ್ಪೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹುಲ್ಲಂಗಾಲ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ವಿದ್ಯೆಯೊಂದಿಗೆ ಪಠ್ಯೇತರ ಚಟುವಟಿಕೆಗಳ ಕಲಿಕೆಗೆ ಒತ್ತು ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ಮಕ್ಕಳ ಪ್ರತಿಭೆ ಹೊರತರಲು ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದರು.
ಇಸಿಒ ಕಾಂತರಾಜು, ಹುಲ್ಲಂಗಾಲ ಬಿಆರ್ ಪಿ ನಯಾಜ್ ಉಲ್ಲಾ, ಗಂಜಲಗೂಡು ಬಿಆರ್ ಪಿ ಋಷಭೇಂದ್ರ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಕಾಶ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ್, ತಾಪಂ ಮಾಜಿ ಅಧ್ಯಕ್ಷ ಮಾದೇಶ್, ಮುಖ್ಯ ಶಿಕ್ಷಕರಾದ ಯಾಸ್ಮಿನ್ ತಾಜ್, ಕೃಷ್ಣೇಗೌಡ, ರಮೇಶ್, ನಂಜರಾಜ್, ರೌಷನ್ ಅರಾ, ದಿವ್ಯ, ಸಾಗರ್, ಪರಮೇಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಕುಮಾರ್, ಸದಸ್ಯರು ಇದ್ದರು.
ಈ ವೇಳೆ ಕ್ಲಸ್ಟರ್ ಮಟ್ಟದ 11 ಶಾಲೆಗಳ ವಿದ್ಯಾರ್ಥಿಗಳು ಊರಿನ ಪ್ರಮುಖ ಬೀದಿಗಳಲ್ಲಿ ಪೂರ್ಣ ಕುಂಭ ಮೆರವಣಿಗೆಯಲ್ಲಿ ಸಾಗಿದರು. ವಿವಿಧ ವೇಷಭೂಷಣಗಳನ್ನು ತೊಟ್ಟು ಹುಲಿವೇಷ, ಕೋಲು ಕುಣಿತ, ಕುದುರೆ ಕುಣಿತ, ವೀರಗಾಸೆ, ಸ್ಥಬ್ಧಚಿತ್ರ ಪ್ರದರ್ಶನ ನಡೆಯಿತು. ಗಟ್ಟಿ ಓದು, ಸಂತೋಷದಾಯಕ ಗಣಿತ, ಕಥೆ ಹೇಳುವುದು, ಕೈ ಬರಹ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಉತ್ದಾಹದಿಂದ ಪಾಲ್ಗೊಂಡಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.