ಸಕಲೇಶಪುರ : ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಜತೆ ಖಾಸಗಿ ಸಂಸ್ಥೆಗಳ ಸಹಕಾರ ಕೂಡ ಅಗತ್ಯ ಎಂದು ಶಾಸಕ ಸಿಮೆಂಟ್ ಮಂಜು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಯಸಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕರ ಅನುದಾನದಲ್ಲಿ ನವೀಕರಣಗೊಂಡಿದ್ದ ಕೊಠಡಿಗಳ ಉದ್ಘಾಟನೆ ಮತ್ತು ಯಸಳೂರು ಕೆನರಾ ಬ್ಯಾಂಕ್ ಸಿಎಸ್‌ಆರ್ ಫಂಡ್‌ನಿಂದ ಶಾಲೆಗೆ ನೀಡಿದ ಪಿಠೋಪಕರಗಳು ಹಾಗೂ ಕಂಪ್ಯೂಟರ್ ಉಪಕರಣಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನ ಹೊಂದಲು ಪ್ರತಿ ಶಾಲೆಗಳಲ್ಲಿ ಕಂಪ್ಯೂಟರ್ ಉಪಕರಣಗಳು ಅತ್ಯವಶ್ಯಕ. ಗ್ರಾಮೀಣ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ಯಸಳೂರು ಕೆನರಾ ಬ್ಯಾಂಕ್ ಶಾಖೆ ವ್ಯವಸ್ಥಾಪಕ ಬಿ.ರವಿವರ್ಮ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರಬೇಕು. ಜತೆಗೆ ವಿದ್ಯೆ ಕಲಿಸಿದ ಶಿಕ್ಷಕರು ಗುರುಹಿರಿಯರನ್ನು ಗೌರವ ಭಾವದಿಂದ ಕಾಣಬೇಕು ಎಂದು ತಿಳಿಸಿದರು.

ಸಕಲೇಶಪುರ ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಲೋಕೇಶ್ ಅವರು ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಸಹಕರಿಸಬೇಕು ಎಂದರು.
ಸುಜಯ್ ವಾಣಿ ಪತ್ರಿಕೆ ಸಂಪಾದಕ ಬಾಳೇಕೆರೆ ಯತೀಶ್ ಮಾತನಾಡಿ, ಶಾಲೆಗಳು ಜ್ಞಾನ ದೇಗುಲಗಳು, ಅಳಿವಿನಂಚಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಲು ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಪೋಷಕರಲ್ಲಿರುವ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹವನ್ನು ಹೋಗಲಾಡಿಸಬೇಕಿದೆ. ಸರ್ಕಾರ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದರೆ ಮಾತ್ರ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಮನು ಪರಮೇಶ್, ಯಸಳೂರು ಪೊಲೀಸ್ ಠಾಣೆ ಪಿ.ಎಸ್.ಐ ಖತಿಜ, ವೈ.ಜೆ ಪ್ರಕಾಶ್, ನಿವೃತ್ತ ಮುಖ್ಯ ಶಿಕ್ಷಕ ಶಿವಪ್ಪ, ಮುಖ್ಯ ಶಿಕ್ಷಕರಾದ ಮಹೇಶ್ ಎಸ್.ಡಿ.ಎಂ.ಸಿ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ವೈ.ವಿ ರಾಜು, ವೈ.ವಿ ಮಂಜಯ್ಯ, ಗ್ರಾ.ಪಂ ಸದಸ್ಯರಾದ ಪವಿತ್ರ ಮಂಜುನಾಥ್, ಸುಶೀಲಮ್ಮ, ಸುನೀತ, ಶಿಕ್ಷಕರಾದ ವೈ.ಡಿ ಶಿವಕುಮಾರ್, ಅವಿನಾಶ್, ಕುಮಾರ್, ಚಂಪಕ, ಸುಮಿತ್ರ, ಕಲಾವತಿ, ರಂಜಿತ, ಸೌಮ್ಯ ಇತರು ಹಾಜರಿದ್ದರು.