ಚಿಕ್ಕಮಗಳೂರು – ಆಶಾವಾದಿ, ಬಲಶಾಲಿಯನ್ನು ಯಶಸ್ಸು-ಅದೃಷ್ಟ ಹಿಂಬಾಲಿಸುತ್ತದೆ ಎಂದು ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕದೊಡ್ಡಯ್ಯ ನುಡಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮತ್ತು ಯುರೇಕಾ ಅಕಾಡೆಮಿ, ಮಾಸಂಪ್ರ ಸಂಯುಕ್ತಾಶ್ರಯದಲ್ಲಿ ಅಂಬಳೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ‘ಪರೀಕ್ಷೆ ಒಂದು ಸಂಭ್ರಮ’ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿ, ಎಸ್‌ಎಸ್‌ಎಲ್‌ಸಿ ಜೀವನದ ಪ್ರಮುಖ ಘಟ್ಟ. ಇಲ್ಲಿ ಯಶಸ್ವಿಯಾಗಿ ತೇರ್ಗಡೆ ಹೊಂದಿದರೆ ಭವಿಷ್ಯದ ಅಧ್ಯಯನ ಮತ್ತು ಜೀವನ ಸುಗಮವಾಗುತ್ತದೆ.
ಹಾಗಾಗಿ ಎಸ್‌ಎಸ್‌ಎಲ್‌ಸಿ ಬಗ್ಗೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಸೇರಿದಂತೆ ಶೈಕ್ಷಣಿಕ ವಲಯ ವಿಶೇಷ ಆಸಕ್ತಿ ತೋರುತ್ತದೆ. ವರ್ಷಪೂರ್ತಿ ಕಲಿತದ್ದನ್ನು ಆತ್ಮವಿಶ್ವಾಸ ಮತ್ತು ಧೈರ್ಯವಾಗಿ ಪರೀಕ್ಷಾ ಸಂದರ್ಭದಲ್ಲಿ ನೆನಪು ಮಾಡಿಕೊಂಡು ಉತ್ತರಿಸಿದರೆ ಒಳ್ಳೆಯ ಅಂಕ ಗಳಿಸುವುದು ಕಷ್ಟವೇನಲ್ಲ. ಆತ್ಮವಿಶ್ವಾಸ ವಿದ್ಯಾರ್ಥಿಗೆ ಬಹಳ ಮುಖ್ಯ. ಶ್ರದ್ಧೆ, ಸತತ ಅಭ್ಯಾಸ, ಪರಿಶ್ರಮ, ಏಕಾಗ್ರಚಿತ್ತತೆಯಿಂದ ತರಗತಿಗಳಲ್ಲಿ ಪಾಠಕೇಳಿದ ವಿದ್ಯಾರ್ಥಿಗೆ ಪರೀಕ್ಷೆ ಎದುರಿಸುವುದು ಸಂಭ್ರಮವೆನಿಸುತ್ತದೆ ಎಂದರು.
ಅನಗತ್ಯ ಗೊಂದಲಗಳಿಗೆ ಮನಸ್ಸು ಕೊಡದೆ ಸಮಚಿತ್ತದಿಂದ ಚೆನ್ನಾಗಿ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿದರೆ ಒಳ್ಳೆಯದು. ಯಾವುದೇ ಪ್ರಶ್ನೆಗಳನ್ನು ನಿರ್ಲಕ್ಷಿಸದೆ ಉತ್ತರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪರೀಕ್ಷಾ ಕೊಠಡಿಯಲ್ಲಿ ಸಮಯ ವ್ಯರ್ಥಮಾಡದೆ, ಇನ್ನೊಬ್ಬರ ಬಗ್ಗೆ ಕುತೂಹಲ ತೋರದೆ ಸಂಪೂರ್ಣ ಮನಸ್ಸನ್ನು ಕೇಂದ್ರೀಕರಿಸಿ ಉತ್ತರಿಸುತ್ತಾ ಹೋದರೆ ತೇರ್ಗಡೆ ಕಠಿಣವಲ್ಲ ಎಂದರು.
ಕಷ್ಟವೆನಿಸುವ, ನೆನಪಿನಲ್ಲಿ ಉಳಿಯದ ಸಂಗತಿಗಳನ್ನು ಪದೇ ಪದೇ ನೆನಪು ಮಾಡುವುದರಿಂದ ಸುಲಭವಾಗಿಸಿಕೊಳ್ಳಬಹುದು. ವ್ಯಾಕರಣ, ಇಂಗ್ಲೀಷ್, ಗಣಿತ ವಿಷಯಗಳು ಹೆಚ್ಚಿನ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಎನಿಸುತ್ತದೆ. ಈ ವಿಷಯಗಳನ್ನು ಪದೇ ಪದೇ ಕೇಳಿ, ಓದಿ, ಬರೆಯುವುದರಿಂದ ಸರಳವಾಗಿಸಿಕೊಳ್ಳಬಹುದು. ಬರವಣಿಗೆಯಿಂದ ಹೆಚ್ಚಿನ ಸಂಗತಿಗಳು ಮನನವಾಗುತ್ತದೆ. ಜೊತೆಗೆ ಬರವಣಿಗೆಯೂ ಶುದ್ಧವಾಗುತ್ತದೆ ಎಂದ ದೀಪಕದೊಡ್ಡಯ್ಯ, ಖಾಸಗಿ ಶಾಲೆಗಳಲ್ಲಿ ಪದೇ ಪದೇ ರಿವಿಜನ್, ಟೆಸ್ಟ್, ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ನಿವಾರಣೆಯಾಗಿ ಹೆಚ್ಚಿನ ಅಂಕಪಡೆಯಲು ಸಹಾಯವಾಗುತ್ತದೆ.
ಆದರೆ ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಣೇತರ ಕರ‍್ಯಭಾರದಲ್ಲಿ ಶಿಕ್ಷಕರನ್ನು ತೊಡಗಿಸುವುದರಿಂದ ಇವೆಲ್ಲ ಕಷ್ಟಸಾಧ್ಯ ಎಂದ ದೀಪಕದೊಡ್ಡಯ್ಯ, ಕಲಿಕೆ ಒಂದು ತಪಸ್ಸು ಎಂದು ಭಾವಿಸಿದರೆ ಪರೀಕ್ಷೆ ಸಂಭ್ರಮವೆನಿಸುತ್ತದೆ ಎಂದರು.
ಅಭಾಸಪ ಶೃಂಗೇರಿ ವಿಭಾಗೀಯ ಸಂಯೋಜಕ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಸಿ ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಎದುರಿಸುವ ಅಂತಿಮ ಹಂತದ ಸಿದ್ಧತೆಗೆ ಒಂದಷ್ಟು ನೆರವಾಗುವ ಯೋಜನೆ ಇದು ಎಂದರು.
ಈ ಸಂದರ್ಭದಲ್ಲಿ ದೀಪಕ್‌ದೊಡ್ಡಯ್ಯ ಅವರನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಪ್ರಭಾರಿ ಮುಖ್ಯಶಿಕ್ಷಕ ಹುಲಿಕೆರೆ ಪ್ರಭಾಕರ , ಶಿಕ್ಷಕಿ ರುಕ್ಮಿಣಿ, ಶಿಕ್ಷಕಿ ಮಮತಾ ಹಾಗೂ ಲಿಖಿತ್, ಸುಬ್ಬು ಮತ್ತಿತರರು ಹಾಜರಿದ್ದರು.