ಕೆ.ಆರ್.ಪೇಟೆ: ತಾಲ್ಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ನಾಗರತ್ನಮ್ಮ ಜಯಕುಮಾರ್ ಅವರ ಮನೆಗೆ ತೀವ್ರ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ರೂ ನಷ್ಟ ಉಂಟಾಗಿರುವ ಕುಟುಂಬಕ್ಕೆ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರು ಆರ್ಥಿಕ ನೆರವು ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ನಾಗರತ್ನಮ್ಮ ಅವರ ಮನೆಯಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಿಂದ ಗೋಡೆ ಜಖಂ ಆಗಿ ಬಿರುಕು ಬಿಟ್ಟಿದೆ. ಮನೆಯ ಮೇಲ್ಛಾವಣಿಯು ಸ್ಫೋಟದ ತೀವ್ರತೆಗೆ ಸಂಪೂರ್ಣ ಹಾನಿಯಾಗಿದೆ. ನಾಗರತ್ನಮ್ಮ ಅವರು ಮನೆಗೆ ಬೀಗ ಹಾಕಿಕೊಂಡು ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಹೊರಟಿದ್ದರು. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ.
ಘಟನೆಯ ವಿಚಾರ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ಆರ್.ಟಿ.ಓ ಮಲ್ಲಿಕಾರ್ಜುನ್ ಅವರು ಸಂತೇಬಾಚಹಳ್ಳಿ ಗ್ರಾಮಕ್ಕೆ ತೆರಳಿ ಸಿಲಿಂಡರ್ ಸ್ಪೋಟದಿಂದ ಹಾನಿಗೊಳಗದ ನಾಗರತ್ನಮ್ಮ ಅವರ ಮನೆಯನ್ನು ವೀಕ್ಷಣೆ ಮಾಡಿ ಘಟನೆಗೆ ಕಾರಣಗಳನ್ನು ತಿಳಿದುಕೊಂಡರು. ನಂತರ ಆರ್ಥಿಕ ಸಹಾಯ ಮಾಡಿ, ಕುಟುಂಬಕ್ಕೆ ಧೈರ್ಯ ತುಂಬಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ಟಿ.ಓ.ಮಲ್ಲಿಕಾರ್ಜುನ್ ಅವರು ಮನೆಯಿಂದ ಹೊರ ಹೋಗುವಾಗ ಗ್ಯಾಸ್ ಸಿಲಿಂಡರ್ ಅನ್ನು ಬಂದ್ ಮಾಡಿ, ಸಿಲಿಂಡರ್ ಗೆ ಗೋಣಿ ಚೀಲ ಸುತ್ತಿ ಹೋಗಬೇಕು. ಗ್ಯಾಸ್ ಪೂರೈಕೆದಾರರು ಸುಸ್ಥಿತಿಯಲ್ಲಿನ ಸಿಲಿಂಡರ್ ನೀಡಿದ್ದಾರೋ ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು.

ರೆಗ್ಯುಲೇಟರ್ ಅನ್ನು ಆಗಾಗ್ಗೆ ಬದಲಾಯಿಸಿಕೊಳ್ಳಬೇಕು. ಇದರಿಂದ ಇಂತಹ ಘಟನೆಗಳು ನಡೆಯದಂತೆ ತಡೆಯಬಹುದು. ಗ್ಯಾಸ್ ಏಜೆನ್ಸಿಗಳು ಕಡ್ಡಾಯವಾಗಿ ವಿಮಾ ಸೌಲಭ್ಯ ಒದಗಿಸಿಕೊಡುವ ಮೂಲಕ ಇಂತಹ ಗ್ಯಾಸ್ ಸೋರಿಕೆಯಂತಹ ಘಟನೆಗೆ ವಿಮಾ ಸುರಕ್ಷೆ ನೀಡಬೇಕು. ಗ್ರಾಹಕರು ಸಹ ಕಡ್ಡಾಯವಾಗಿ ವಿಮಾ ಸುರಕ್ಷೆ ಇದೆ ಎಂಬುದನ್ನು ಖಚಿತ ಪಡಿಸಿಕೊಂಡು ಗ್ಯಾಸ್ ಬಳಕೆ ಮಾಡಬೇಕು ಎಂದು ಆರ್.ಟಿ.ಓ.ಮಲ್ಲಿಕಾರ್ಜುನ್ ತಿಳಿಸಿದರು.
ಈ ಸಂದರ್ಭದಲ್ಲಿ ಸಂತೇಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹರೀಶ್, ತಾಲ್ಲೂಕು ಸಹಕಾರ ಯೂನಿಯನ್ ಮಾಜಿ ಅಧ್ಯಕ್ಷ ಮರಿಸ್ವಾಮೀಗೌಡ, ಗೆಳೆಯರ ಬಳಗದ ಕಾರ್ಯದರ್ಶಿ ಕೃಷ್ಣ, ಗ್ರಾ.ಪಂ.ಮಾಜಿ ಸದಸ್ಯರಾದ ಸುರೇಶ್, ಹರೀಶ್, ಮಂಜೇಗೌಡ, ಮರೀಗೌಡ, ಛಾಯಾಕುಮಾರ್, ಪುನೀತ್, ಎಸ್.ಎನ್.ಲೋಕೇಶ್, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.