ಚಿಕ್ಕಮಗಳೂರು. ಸುಳ್ಳು ಆರೋಪ ಹೊರಿಸಿ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ತೊಡಕುಂಟು ಮಾಡುತ್ತಿರುವ ಕೆಲ ದಲಿತ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ದಲಿತ್ ಜನ ಸೇನಾ ಕಾರ್ಯಕರ್ತರು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರನ್ನು ಭೆಟಿಯಾಗಿ ಮನವಿ ನೀಡಿ ಕೂಡಲೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳ್ಳುವಂತೆ ಒತ್ತಾಯಿಸಿದರು.
ದಲಿತ ಜನ ಸೇನಾ ಸಂಘಟನೆಯ ಮುಖಂಡರು ಮಾತನಾಡಿ ನಗರದ ಹೊರ ವಲಯದ ಬೀಕನಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅನುಮತಿ ಇಲ್ಲದೆ ಅತಿಕ್ರಮ ಪ್ರವೇಶ ಮಾಡಿರುವ ಕೆಲ ದಲಿತ ಸಂಘಟನೆಯ ಮುಖಂಡರು ಪ್ರಾಂಶುಪಾಲರನ್ನು ನಿಂದಿಸಿ ಸಿಬ್ಬಂದಿಗಳನ್ನು ನಿಂದಿಸಿ ಬೆದರಿಕೆ ಹೊಡ್ಡಿದ್ದು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುತ್ತಾರೆ ಅಲ್ಲದೇ ಇದನ್ನು ಪ್ರಶ್ನಿಸಲು ಹೋದಾಗ ಜಾತಿನಿಂದನೆ ಮಾಡಿದ್ದಾರೆಂದು ಸುಳ್ಳು ಆರೋಪ ಹೊರಿಸಿ ಶಾಲಾ ಸಿಬ್ಬಂದಿಗಳ ಮೇಲೆ ಪ್ರಕರಣ ದಾಖಲಿಸಿರುತ್ತಾರೆ ಈ ಮೂಲಕ ಶಾಲೆಯ ಶೈಕ್ಷಣಿಕ ವಾತಾವರಣಕ್ಕೆ ತೊಡಕುಂಟುಮಾಡಲು ಪ್ರಯತ್ನಿಸಿರುವುದು ಖಂಡನೀಯ ಎಂದಿದ್ದಾರೆ.
ಸುಳ್ಳು ಜಾತಿ ನಿಂದನೆ ಆರೋಪವನ್ನು ಅಲ್ಲಿನ ಶಾಲಾ ಸಿಬ್ಬಂದಿಗಳ ಮೇಲೆ ಮಾಡಿದ್ದು ಆರೋಪ ಹೊತ್ತುಕೊಂಡಿರುವ ಸಿಬ್ಬಂದಿಗಳಲ್ಲಿ ಕೆಲವರು ಪರಿಶಿಷ್ಟರೇ ಆಗಿದ್ದು ಸುಮ್ಮನೆ ಈ ರೀತಿಯ ಜಾತಿನಿಂದನೆ ಪ್ರಕರಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ ಎಂದಿದ್ದಾರೆ.

ಶಾಲೆಗೆ ಅತಿಕ್ರಮ ಪ್ರವೇಶ ಮಾಡಿ ಕರ್ತವ್ಯ ನಿರತರ ಮೇಲೆ ಹಲ್ಲೆ ಮಾಡಿದ್ದು ತಮಗೆ ಮುಳುವಾಗಬಹುದೆಂದು ದೂರು ನೀಡಿದ್ದ ಶಿಕ್ಷಕ ವಿಜಯ್ ಕುಮಾರ್ ಮೇಲೆಯೂ ಸಹ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲು ಮಾಡಲಾಗಿದೆ, ನಮ್ಮ ದಲಿತ ಸಂಘಟನೆಗಳು ದಲಿತರ ಉದ್ದಾರಕ್ಕಾಗಿಯೇ ದ್ವನಿ ಎತ್ತಬೇಕಾಗಿದೆಯೇ ಹೊರತು ಈ ರೀತಿಯಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಉತ್ತಮ ರೀತಿಯಲ್ಲಿ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯ ಸಿಬ್ಬಂದಿಗಳ ಮೇಲೆ ಕೆಲ ದಲಿತ ಮುಖಂಡರು ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಾ ಶಾಲೆಯಲ್ಲಿ ವ್ಯತಿರಿಕ್ತ ವಾತಾವರಣವನ್ನು ಉಂಟು ಮಾಡಿರುವುದು ಅಲ್ಲಿನ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಈ ಸಾಲಿನ ವಾರ್ಷಿಕ ಪರೀಕ್ಷೆಯು ಕೆಲವೇ ದಿನಗಳಲ್ಲಿ ಸಮೀಪಿಸುತ್ತಿದ್ದು ಈ ಕೆಲ ದಲಿತ ಮುಖಂಡರಿAದ ದಾಖಲಾಗಿರುವ ಸುಳ್ಳು ಪ್ರಕರಣಗಳಿಂದ ಹಲವು ಶಿಕ್ಷಕರು ಬಳಲುತ್ತಿದ್ದು ತಮ್ಮ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೆ ಮಕ್ಕಳ ಮೇಲೆ ಈ ಘಟನೆ ನೇರ ಪರಿಣಾಮ ಬೀಳುತ್ತಿದೆ, ಅಲ್ಲದೆ ಈ ವಾತಾವರಣವೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆ ಉಂಟುಮಾಡಬಹುದು ಮತ್ತು ಈ ಬಾರಿಯ ಫಲಿತಾಂಶದ ಮೇಲೆ ಬಹುದೊಡ್ಡ ಪರಿಣಾಮವನ್ನೇ ಸೃಷ್ಟಿ ಮಾಡಬಹುದು ಎಂದು ಆರೋಪಿಸಿದರು.

ಈ ಬಗ್ಗೆ ಜಿಲ್ಲಾಡಳಿತ ಸಂಪೂರ್ಣವಾಗಿ ತನಿಖೆ ನಡೆಸಿ ಕೂಡಲೇ ಕ್ರಮ ಜರುಗಿಸಿ ತಪ್ಪಿಸ್ತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರಲ್ಲದೆ ಮಕ್ಕಳ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರದೆ ಮಕ್ಕಳ ವಿದ್ಯಾಭ್ಯಾಸ ತೊಡಕಿಲ್ಲದಂತೆ ನಡೆಯಲು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದೆ.
ಈ ಸಂದರ್ಭದಲ್ಲಿ ದಲಿತ ಜನ ಸೇನಾ ಮಹಿಳಾ ಜಿಲ್ಲಾಧ್ಯಕ್ಷ ಸ್ವರ್ಣ ಗೌರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಸಂಕಲ್ಪ, ಜಿಲ್ಲಾ ಸಂಚಾಲಕ ವೆಂಕಟೇಶ್, ರಾಜಶೇಖರ್, ಅರುಣ್, ನಾಗರಾಜ್, ಸತೀಶ್ ,ಸಚಿನ್, ಗಗನ್, ಹರೀಶ್, ರೋಹಿತ್ ಮುಂತಾದವರು ಇದ್ದರು.