ಮೂಡಿಗೆರೆ:ಶಾಸಕರಾಗಿ ಆಯ್ಕೆಯಾದ ಅಲ್ಪ ಸಮಯದಲ್ಲೇ ಬರೋಬ್ಬರಿ 180 ಕೋಟಿಗೂ ಅಧಿಕ ಅನುದಾನವನ್ನು ತಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡುತ್ತಿರುವ ಶಾಸಕಿ ನಯನ ಮೋಟಮ್ಮನವರ ವಿರುದ್ಧ ಎಸ್ ಡಿ ಪಿ ಐ ತಾಲೂಕು ಅಧ್ಯಕ್ಷ ಅಂಗಡಿ ಚಂದ್ರು ವಿವಿಧ ರೀತಿಯಲ್ಲಿ ತೇಜೋವದೆಗೆ ಇಳಿದಿರುವುದು ಖಂಡನೀಯ ಎಂದು ಜಿಲ್ಲಾ ಕೆ ಡಿ ಪಿ ಸದಸ್ಯ ಹೆಚ್.ಎಸ್.ಸುಧೀರ್ ಚಕ್ರಮಣಿ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ತಾಲೂಕಿನಲ್ಲಿ ಅನೇಕ ವರ್ಷದಿಂದ ಬಗೆಹರಿಯದಿರುವ ನಿವೇಶನ ಸಮಸ್ಯೆಯನ್ನು ಅರಿತಿರುವ ಶಾಸಕರು,ನಿವೇಶನ ಸಮಸ್ಯೆಗೆ ಮುಕ್ತಿ ಕಾಣಲು ಪಂಚಾಯಿತಿ ಮಟ್ಟದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ.
ಅಲ್ಲದೇ ತಾಲೂಕಿನಲ್ಲಿರುವ ರಸ್ತೆ ,ಸೇತುವೆ ,ಶಾಲೆ, ಅಂಗನವಾಡಿ, ಸಮುದಾಯಭವನ, ಕುಡಿಯುವ ನೀರು,ಕಾಫಿ ಬೆಳೆಗಾರರ ಸಮಸ್ಯೆ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯ ನಿರಂತರವಾಗಿ ನಡೆಸುತ್ತಿದ್ದಾರೆ. ಶಾಸಕರು ಇಷ್ಟೆಲ್ಲಾ ಜನಪರವಾದ ಕಾರ್ಯ ನಡೆಸುತ್ತಿರುವ ಬಗ್ಗೆ ಮಾಹಿತಿ ಇಲ್ಲದೇ ಏಕಾಏಕಿ ಶಾಸಕರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಕೇವಲ ಅಲ್ಪ ಅವದಿಯಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಶಾಸಕರು ಮುಂದಿನ ಮೂರುವರೆ ವರ್ಷದಲ್ಲಿ ಇಡೀ ರಾಜ್ಯವೇ ನಮ್ಮ ಕ್ಷೇತ್ರವನ್ನು ತಿರುಗಿ ನೀಡುವಂತೆ ಅಭಿವೃದ್ಧಿ ಕಾರ್ಯ ನಡೆಸಲಿದ್ದಾರೆಂದು ಹೇಳಿದರು.
ಶಾಸಕರ ಗೃಹ ಕಚೇರಿಯಲ್ಲಿ ಪ್ರತಿನಿತ್ಯವೂ ಸಾರ್ವಜನಿಕರ ಭೇಟಿಗೆ ಅವಕಾಶ ಮಾಡಿಕೊಡಲಾಗಿದೆ.ವಾರದಲ್ಲಿ ಕನಿಷ್ಟ 5 ದಿನ ಶಾಸಕರು ಕ್ಷೇತ್ರದಲ್ಲಿಯೇ ಇದ್ದು ಜನರ ಸಮಸ್ಯೆಗಳನ್ನು ಆಲಿಸುವ ಮೂಲಕ ಪರಿಹಾರ ಕಲ್ಪಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.
ಅಲ್ಲದೇ ಕ್ಷೇತ್ರದ 3 ಬ್ಲಾಕ್ಗಳಲ್ಲಿ 3 ಮಂದಿ ಶಾಸಕರ ಆಪ್ತ ಸಹಾಯಕರನ್ನು ನಿಯೋಜನೆ ಮಾಡಿದ್ದು, ಅವರು ವಾರದ 6
ದಿನವೂ ಕಚೇರಿಯಲ್ಲಿ ಜನರ ಅಹವಾಲು ಆಲಿಸಿ,ಶಾಸಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ.ಸಾರ್ವಜನಿಕರ ಭೇಟಿ ಸಮಯ ಹೊರತುಪಡಿಸಿ ಬೇರೆ ಸಮಯದಲ್ಲಿ ಅನಗತ್ಯ ಫೋಟೊ ತೆಗೆದು ಶಾಸಕರ ಗೃಹ ಕಚೇರಿಯೇ ತೆರೆದಿಲ್ಲವೆಂದು ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ದೂರಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಎಸ್ಟಿ ಘಟಕ ಅಧ್ಯಕ್ಷ ಹರೀಶ್ ಸಬ್ಬೇನಹಳ್ಳಿ,ಸುರೇಶ್ ಹೆಸಗಲ್ ಉಪಸ್ಥಿತರಿದ್ದರು.
ವರದಿ: ವಿಜಯಕುಮಾರ್.ಟಿ.